

ಚಾಮರಾಜನಗರ: ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾವೇ ಎಂದು ಪದೇ ಪದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಹೇಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ 56 ಇಂಚಿನ ಎದೆ ಏನಾಯ್ತು ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ರಂಪ್ ಕಂಡರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಭಯನಾ? ಇದನ್ನು ನಾವು ಪ್ರಶ್ನಿಸಿದರೆ ಕಾಂಗ್ರೆಸ್‌ನವರು ಪಾಕಿಸ್ತಾನ ಪರ ಅಂತಾರೆ ಎಂದರು. ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಸಾರಿಗೆ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರ ದಿನದ ಖರ್ಚು ಎಷ್ಟು ಅಂತ ಮೊದಲು ಬಹಿರಂಗಪಡಿಸಲಿ. ಸಾರಿಗೆ ನೌಕರರಿಗೆ ಬಾಕಿ ಕೊಡುವುದರಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಆದರೆ ನಾವು ಬಂದಾಗಿನಿಂದ 5 ಸಾವಿರಕ್ಕೂ ಹೆಚ್ಚು ಹೊಸ ಬಸ್ ಖರೀದಿ ಮಾಡಿದ್ದೇವೆ. 6 ಸಾವಿರ ಜನರಿಗೆ ಉದ್ಯೋಗ ನೀಡಿದ್ದೇವೆ ಎಂದು ಹೇಳಿದರು.
ಇಡೀ ದೇಶದಲ್ಲಿ ಕರೊನಾದಿಂದ 40 ಲಕ್ಷ ಜನ ಸತ್ತಿದ್ದರು. ಆದರೆ ಬಿಜೆಪಿ ಸರ್ಕಾರ ಕೇವಲ 4 ಲಕ್ಷ ಎಂದು ಸುಳ್ಳು ಹೇಳಿತು. ಕೋವಿಡ್ ವ್ಯಾಕ್ಸಿನ್ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿ ೆಟೋ ಹಾಕಿದ್ದರು. ವ್ಯಾಕ್ಸಿನ್‌ನಿಂದ ತೊಂದರೆಯಾಗುತ್ತಿದೆ ಎಂದು ಚರ್ಚೆಯಾಗುತ್ತಿದ್ದಂತೆಯೇ ಪ್ರಮಾಣಪತ್ರದ ಮೇಲಿದ್ದ ಫೋಟೋ ಕಾಣೆಯಾಗಿದೆ ಎಂದು ಆರೋಪಿಸಿದರು. ಆಕ್ಸಿಜನ್ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡಲು ಸರ್ಕಾರ ಬದ್ಧವಾಗಿದೆ. ತಡವಾಗಿರುವುದಕ್ಕೆ ಕ್ಷಮೆ ಕೇಳುತ್ತೇನೆ ಎಂದರು.