ಟೌನ್‌ಶಿಪ್‌ಗೆ ನಂದಗುಡಿ ರೈತರ ವಿರೋಧ

0000
Published on

ಶಾಸಕ ಶರತ್ ನೇತೃತ್ವದಲ್ಲಿ ಜನಾಭಿಪ್ರಾಯ ಸಭೆ, ಯೋಜನೆ ಬೇಡ ಎಂದ ಕೃಷಿಕರು

ವಿಜಯವಾಣಿ ಸುದ್ದಿಜಾಲ ನಂದಗುಡಿ
ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯಲ್ಲಿ ಟೌನ್‌ಶಿಪ್ ಯೋಜನೆಗೆ ರೈತರಿಂದ ಭಾರಿ ವಿರೋಧ ವ್ಯಕ್ತವಾಗಿದೆ.
ಟೌನ್‌ಶಿಪ್ ವಿಚಾರವಾಗಿ ಜನಾಭಿಪ್ರಾಯ ಸಂಗ್ರಹಿಸಲು ನಂದಗುಡಿ ಕಾಡು ಮಲ್ಲೇಶ್ವರ ದೇವಾಲಯದ ಆವರಣದಲ್ಲಿ ಬುಧವಾರ ಶಾಸಕ ಶರತ್ ಬಚ್ಚೇಗೌಡ ಸಮ್ಮುಖದಲ್ಲಿ ಆಯೋಜಿಸಿದ್ದ 32 ಗ್ರಾಮಗಳ ರೈತರ ಸಭೆಯಲ್ಲಿ ರೈತರು ಯೋಜನೆ ವಿರುದ್ಧ ಆಕ್ರೋಶ ಹೊರಹಾಕಿದರು.
ನಂದಗುಡಿ ಅತಿ ಹೆಚ್ಚು ತರಕಾರಿ, ಹೂವು, ರೇಷ್ಮೆ ಬೆಳೆಯುವ ಹಾಗೂ ಹೈನುಗಾರಿಕೆ ಮಾಡುವ ಪ್ರದೇಶವಾಗಿದೆ.
ಟೌನ್‌ಶಿಪ್ ನಿರ್ಮಾಣದಿಂದ ರೈತರು ಭೂಮಿ ಕಳೆದುಕೊಳ್ಳುವುದಲ್ಲದೆ, ಸರ್ಕಾರದಿಂದ ಬರುವ ಹಣ ಖರ್ಚು ಮಾಡಿಕೊಂಡು ಖಾಲಿ ಕೈಯಲ್ಲಿ ಕೂರಬೇಕಾಗುತ್ತದೆ. ನಮ್ಮ ಭೂಮಿಯಲ್ಲಿ ಕೋಟಿ ಸಂಪಾದನೆ ಮಾಡಿದರೂ ಸರಿ, ಲಕ್ಷ ಸಾಲ ಮಾಡಿಕೊಂಡರೂ ಸರಿ ಭೂಮಿ ಬಿಡುವುದಿಲ್ಲ ಎಂದು ಇಟ್ಟಸಂದ್ರದ ದೇವೇಗೌಡ ಹೇಳಿದರು.
ರೈತ ಸಂಘದ ಅಧ್ಯಕ್ಷ ಅಕ್ಲೇಗೌಡ ಮಾತನಾಡಿ, ಸಾಕಷ್ಟು ರೈತರಿಗೆ ಜಮೀನು ಕೊಡುವ ಇಂಗಿತ ಇರಬಹುದು. ಆದರೆ, ಮುಂದಿನ ಪೀಳಿಗೆಗೆ ಜಮೀನನ್ನು ಕಾಪಾಡಿಕೊಂಡು ಒಕ್ಕಲುತನ ಮುಂದುವರಿಸಬೇಕು. ಆದ್ದರಿಂದ ಶಾಸಕರು ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕೃಷಿ ಚಟುವಟಿಕೆ ಮಾಡಲು ಸಹಕಾರ ನೀಡಬೇಕು, ಕೃಷಿಭೂಮಿಯತ್ತ ಕಣ್ಣಾಕಬಾರದು ಎಂದು ಮನವಿ ಮಾಡಿದರು.
ಎಸ್‌ಎಫ್‌ಸಿಎಸ್ ಅಧ್ಯಕ್ಷ ಕೆ.ಮಂಜುನಾಥ್, ಕಲ್ಕೆರೆ ಕೆ.ಎಸ್.ಮಹದೇವಯ್ಯ ಎಂ.ಮಂದೀಪ್‌ಗೌಡ, ಹಿರಿಯ ಮುಖಂಡ ಐ.ಸಿ.ಮುನಿಶಾಮಗೌಡ, ಗ್ರಾಪಂ ಅಧ್ಯಕ್ಷೆ ಮುನಿವೆಂಕಟಮಮ್ಮ ಬಚ್ಚೇಗೌಡ, ಗ್ರಾಪಂ ಸದಸ್ಯರು ಹಾಗೂ ನೂರಾರು ರೈತರು ಇದ್ದರು.
ಟೌನ್‌ಶಿಪ್ ಅಗತ್ಯವಿಲ್ಲ: ಪಿಲ್ಲಗುಂಪೆ, ಕೈವಾರ, ನರಸಾಪುರ, ವೇಮಗಲ್ ಭಾಗಗಳಲ್ಲಿ ಕೈಗಾರಿಕಾ ಪ್ರದೇಶಗಳಿವೆ. ಇದರ ನಡುವೆ ನಂದಗುಡಿಗೆ ಟೌನ್ ಶಿಪ್ ಅಗತ್ಯತೆ ಇಲ್ಲ. ಆದ್ದರಿಂದ ನಮ್ಮ ಗ್ರಾಮಗಳಿಗೆ ಉತ್ತಮ ರಸ್ತೆ, ನೀರು ಕೊಡಿ. ದವಸ, ಧಾನ್ಯಗಳ ಬೆಲೆ ಗಗನಕ್ಕೇರಿದೆ. ಆದ್ದರಿಂದ ಕೃಷಿಗೆ ಉತ್ತೇಜನ ನೀಡುವ ಕೆಲಸ ಮಾಡಿಕೊಡಿ ಎಂದು ಕುರಿ ಮತ್ತು ಉಣ್ಣೆ ಸಹಕಾರ ಸಂಘದ ಮಾಜಿ ಅಧ್ಯಕ್ಷ ಅನಂತನಾರಾಯಣ್ ಶಾಸಕರಲ್ಲಿ ಮನವಿ ಮಾಡಿದರು. ಭಾರತೀಯ ಕಿಸಾನ್ ಸಂಘವೂ ಟೌನ್ ಶಿಪ್ ನಿರ್ಮಾಣ ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿತು.


ಭೂಮಿ ನೀಡಲು ವಿರೋಧವಿದ್ದರೆ ಹೋರಾಟಕ್ಕೆ ಸಿದ್ಧರಾಗಿ: ಹದಿನೆಂಟು ಸಾವಿರ ಎಕರೆಯಲ್ಲಿ ಟೌನ್‌ಶಿಪ್ ಮಾಡಲು ಸರ್ಕಾರ ಉದ್ದೇಶಿಸಿದ್ದು, ಇದರಿಂದ ಸರ್ಕಾರ ಪರಿಹಾರ ನೀಡುವ ಜತೆಗೆ ಭೂಮಿಯನ್ನೂ ಅಭಿವೃದ್ಧಿಪಡಿಸಲಾಗುವುದು. ಪ್ರಮುಖವಾಗಿ ನಂದಗುಡಿ, ಸೋಲೂರು, ಸಾತನೂರು, ಬಿಡದಿ ಬಳಿ ಜಾಗವನ್ನು ಗುರುತಿಸಿದ್ದು, ಟೌನ್‌ಶಿಪ್ ನಿರ್ಮಾಣ ಮಾಡುವ ಮೂಲಕ ಕೈಗಾರಿಕೆಗಳ ಅಭಿವೃದ್ಧಿಯೂ ಆಗಲಿದೆ. ಆದರೆ ಭೂಮಿ ಜತೆ ರೈತರು ಸಾಕಷ್ಟು ಅವಿನಾಭವ ಸಂಬಂಧ ಹೊಂದಿರುತ್ತಾರೆ. ಆದ್ದರಿಂದ ರೈತರು ಅಭಿಪ್ರಾಯ ವ್ಯಕ್ತಪಡಿಸಬಹುದು. ಟೌನ್‌ಶಿಪ್‌ಗೆ ಭೂಮಿ ನೀಡಲು ರೈತರು ವಿರೋಧವಿದ್ದರೆ ಮುಂದಿನ ಹೋರಾಟಕ್ಕೆ ಸಹ ಸಿದ್ಧರಾಗಬೇಕಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು. ನಂದಗುಡಿ ಹಾಗೂ ಸೂಲಿಬೆಲೆ ಹೋಬಳಿ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದಿಂದ 60 ಎಂಎಲ್‌ಡಿ ನೀರನ್ನು ಹೊರಮಾವು ಬಳಿಯಿಂದ ಬೆಟ್ಟಕೋಟೆಯಿಂದ ನಂದಗುಡಿ ಹಾಗೂ ಸೂಲಿಬೆಲೆ ಭಾಗದ 59 ಕೆರೆಗೆ ನೀರು ಹರಿಸಲು ಡಿಪಿಆರ್ ತಯಾರಾಗಿದ್ದು, 150 ಕೋಟಿ ವೆಚ್ಚದಲ್ಲಿ ವೃಷಭಾವತಿ ನೀರು ತುಂಬಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net