

ಮೈಸೂರು: ಮೈಸೂರು-ನಂಜನಗೂಡು ಮುಖ್ಯರಸ್ತೆಯ ಕಡಕೊಳ ಬಳಿ ಇರುವ ಹೆದ್ದಾರಿ ಟೋಲ್ ಸಂಗ್ರಹವನ್ನು ಕೈ ಬಿಡುವಂತೆ ಒತ್ತಾಯಿಸಿ ರೈತ ಪರ್ವ ಸಂಘಟನೆಯಿಂದ ಸೋಮವಾರ ಪ್ರತಿಭಟನೆ ನಡೆಯಿತು.
ಟೋಲ್ ಸಂಗ್ರಹದ ದ್ವಾರದ ಬಳಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಹೆದ್ದಾರಿ ಶುಲ್ಕ ಸಂಗ್ರಹ ಅವೈಜ್ಞಾನಿಕವಾಗಿದ್ದು, ಈ ಸಂಗ್ರಹವನ್ನು ಇನ್ನೆರಡು ತಿಂಗಳಲ್ಲಿ ನಿಲ್ಲಿಸಬೇಕು. ಇಲ್ಲವಾದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ನೀಡಿ ಅಭಿವೃದ್ಧಿ ಪಡಿಸಿದ ಮೇಲೆ ಈಗ ಸಾರ್ವಜನಿಕರ ವಾಹನಗಳಿಂದ ಹಣ ಸಂಗ್ರಹಿಸುವುದು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶವಾಗಿದೆ. ವಾಹನಗಳನ್ನು ಖರೀದಿಸುವಾಗಲೇ ಸರ್ಕಾರಕ್ಕೆ ರಸ್ತೆ ತೆರಿಗೆಯನ್ನು ಪಾವತಿಸಲಾಗುತ್ತದೆ. ಆದರೂ ಸಹಭಾಗಿತ್ವದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಜನರನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ದೂರಿದರು.
ಟೋಲ್ ಸಂಗ್ರಹಕ್ಕೆ ಸಂಬಂಧಪಟ್ಟಂತೆ ಸರ್ಕಾರದ ನಿಯಮವನ್ನು ಅನುಸರಿಸುತ್ತಿಲ್ಲ. ರೈತರು, ಸುತ್ತಮುತ್ತಲ ಗ್ರಾಮಗಳ ರೈತರ ವಾಹನಗಳಿಗೆ ಶುಲ್ಕ ತೆಗೆದುಕೊಳ್ಳುವಂತಿಲ್ಲ ಎನ್ನುವ ಷರತನ್ನು ಒಪ್ಪಿಕೊಂಡಿದ್ದರೂ ಅದನ್ನು ಪಾಳಿಸುತ್ತಿಲ್ಲ. ಈಗಾಗಲೇ ಟೋಲ್ ಸಂಗ್ರಹ ರಸ್ತೆಗೆ ಮಂಜೂರಾಗಿದಂತಹ ಅನುದಾನಕ್ಕಿಂತಲೂ ಹೆಚ್ಚಾಗಿ ಸಂಗ್ರಹವಾಗಿದೆ ಎನ್ನುವ ಮಾಹಿತಿ ಇದೆ. ಇದರ ಕುರಿತು ಸರ್ಕಾರ ನಿಖರ ಮಾಹಿತಿ ನೀಡಬೇಕು. ಇನ್ನೆರಡು ತಿಂಗಳಲ್ಲಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹೇಳಿದರು.
ರಾಜ್ಯ ರೈತ ಪರ್ವ ಸಂಘಟನೆ ಅಧ್ಯಕ್ಷ ಅರುಣ್ ಕುಮಾರ, ರಾಜ್ಯ ರೈತ ಪರ್ವ ಸಂಘಟನೆ ಉಪಾಧ್ಯಕ್ಷ ಭರತ್, ಜಿಲ್ಲಾಧ್ಯಕ್ಷ ಬಸವರಾಜು, ಮುಖಂಡರಾದ ಕಲ್ಕುಂದ ಬೊಗಣ್ಣ, ಮಹಿಳಾ ಘಟಕದ ಹಳ್ಳಿದಿಡ್ಡಿ ಭಾಗ್ಯಮ್ಮ ಇತರರು ಇದ್ದರು.