

ಕೋಲಾರ ತುಟ್ಟಿಯಾಗಿದ್ದ ಟೊಮ್ಯಾಟೋ ಬೆಲೆ ಆ.೨ರ ಬಳಿಕ ಇಳಿಮುಖವಾಗುತ್ತಿದ್ದು, ಏಷ್ಯಾದ ೨ನೇ ದೊಡ್ಡದಾದ ಕೋಲಾರ ಕೃಷಿ ಮಾರುಕಟ್ಟೆಯಲ್ಲಿ ಶುಕ್ರವಾರ ಕನಿಷ್ಠ ೨೦ರೂ. ಮತ್ತು ಗರಿಷ್ಟ ೫೩ರೂ.ಗೆ ಮಾರಾಟವಾಗಿದೆ. ಇದರೊಂದಿಗೆ ಕಳೆದ ತಿಂಗಳು ೧೬೦ರೂಗೆ ಏರಿಕೆಯಾಗಿ ದಾಖಲೆ ಬರೆದಿದ್ದ ಈ ಉತ್ಪನ್ನ ವಾರ ಕಳೆಯುವಷ್ಟರಲ್ಲಿ ದಿನೇ ದಿನೆ ಬೆಲೆ ಕಡಿಮೆಯಾಗಿ ಪ್ರಸ್ತುತ ಗ್ರಾಹಕನ ಕೈಗೆಟಕುವಂತಾಗಿದೆ.
ಆ.೨ರವರೆಗೆ ೧ಕೆಜಿ ಟೊಮ್ಯಾಟೊ ಗರಿಷ್ಠದರ ೧೬೦ರೂ. ಇದ್ದಿದ್ದು, ಆದರೆ ಆಗಸ್ಟ್ ೩ರಬಳಿಕ ದರ ಕಡಿಮೆಯಾಗುತ್ತ ಬಂದು ಆ.೭ರಂದು ಗರಿಷ್ಠ ೧೦೦ರೂ.ಗೆ ಮಾರಾಟವಾಗಿತ್ತು. ಆ.೮ರಂದು ಸಹ ೧೦೦ರೂ.ಗೆ ಮಾರಾಟವಾಗಿದ್ದು, ಆ.೯ರಂದು ಕನಿಷ್ಠ ೨೬ರೂ. ಮತ್ತು ಗರಿಷ್ಠ ೭೩ರೂ.ಗೆ ಮಾರಾಟವಾಗಿತ್ತು. ಆ.೧ರಂದು ೮೭೭೫ ಕ್ವಿಂಟಾಲ್ ಉತ್ಪನ್ನ ಸರಬರಾಜಾಗಿದ್ದು, ಆ.೭ರಂದು ೧೨,೧೩೮ಕಿಂಟಾಲ್, ಆ.೯ರಂದು ೧೨,೯೧೬ ಕ್ವಿಂಟಾಲ್, ಆ.೧೧ರಂದು ೧೩೨೫೮ ಕ್ವಿಂಟಾಲ್ ಸರಬರಾಜಾಗಿದೆ. ಮಾರುಕಟ್ಟೆಗೆ ಬರುತ್ತಿರುವ ಉತ್ಪನ್ನದಲ್ಲಿ ಏರಿಕೆ ಕಂಡುಬಂದಿದ್ದು, ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಿದೆ.
ಕೋಲಾರ ಜಿಲ್ಲೆಯಲ್ಲಿ ವೈರಸ್ ಕಾಟದಿಂದ ಟೊಮ್ಯಾಟೊ ಬೆಳೆ ಕಡಿಮೆಯಾಗಿದ್ದು, ಐದಾರು ಸಾವಿರ ಕ್ವಿಂಟಾಲ್ ಮಾತ್ರ ಸ್ಥಳೀಯ ಉತ್ಪನ್ನ ಸರಬರಾಜಾಗುತ್ತಿದೆ. ಉತ್ಪನ್ನ ಹೆಚ್ಚಾಗಿ ಚಳ್ಳಕೆರೆ, ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಆಂಧ್ರದ ಮಲಕಲಚೆರುವು ಕಡೆಯಿಂದ ಕೋಲಾರ ಮಾರುಕಟ್ಟೆಗೆ ಸರಬರಾಜಾಗಿ, ಇಲ್ಲಿಂದ ದೇಶ ವಿದೇಶಗಳಿಗೆ ರಫ್ತಾಗುತ್ತಿದೆ.