

ತಿ.ನರಸೀಪುರ: ಟೈಲರಿಂಗ್ ವೃತ್ತಿಯನ್ನು ಇಂತಹವರೇ ಮಾಡಬೇಕು ಎನ್ನುವ ನಿರ್ಬಂಧವಿಲ್ಲ. ವೃತ್ತಿಯು ಜಾತಿ, ಧರ್ಮಕ್ಕೆ ಸೇರಿದ್ದಲ್ಲ. ಕೌಶಲ ಗೊತ್ತಿರುವ ಎಲ್ಲರೂ ಟೈಲರಿಂಗ್ ವೃತ್ತಿಯಲ್ಲಿ ತೊಡಗಿಸಿಕೊಳ್ಳಬಹುದು ಎಂದು ಶಾಸಕ ಎಂ.ಅಶ್ವಿನ್‌ಕುಮಾರ್ ಹೇಳಿದರು.
ಪಟ್ಟಣದ ಟಿಎಪಿಸಿಎಂಎಸ್ ರೈತ ಭವನದಲ್ಲಿ ತಿ.ನರಸೀಪುರ ತಾಲೂಕು ಟೈಲರ್‌ಗಳ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಟೈಲರ್‌ಗಳ ಸಮಾವೇಶದಲ್ಲಿ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು.
ಟೈಲರ್‌ಗಳು ಕುಲಕಸುಬನ್ನು ಕೀಳರಿಮೆಯಿಂದ ಕಾಣಬಾರದು. ಆಯ್ಕೆ ಮಾಡಿಕೊಂಡಿರುವ ವೃತ್ತಿಯ ಬಗ್ಗೆ ಸಂತಸಪಡಬೇಕು. ಸರ್ಕಾರ ಕಾರ್ಮಿಕರ ಅಭಿವೃದ್ಧಿಗೆ ಸಾಕಷ್ಟು ಅನುದಾನ ಮೀಸಲಿಟ್ಟಿದ್ದರೂ, ಸರಿಯಾಗಿ ತಲುಪಿಸುವ ಕೆಲಸವಾಗುತ್ತಿಲ್ಲ. ಸರ್ಕಾರದ ಸೌಲಭ್ಯಗಳನ್ನು ಸಂಘಟನೆಯ ಮೂಲಕ ಪಡೆದು ಸಮಸ್ಯೆಗಳಿಂದ ಹೊರಬರಬೇಕು. ಟೈಲರ್ ಸಂಘದ ಮನವಿ ಮೇರೆಗೆ ಸಮುದಾಯ ಭವನಕ್ಕೆ ನಿವೇಶನ ನೀಡಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ನಾರಾಯಣ್ ಮಾತನಾಡಿ, ಟೈಲರ್‌ಗಳ ವೃತ್ತಿ ಕಷ್ಟಕರವಾಗಿದ್ದು, ಯಾವುದೇ ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ವೃತ್ತಿಯಿಮದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿದ್ದು, ವಿಮೆ ಸೌಲಭ್ಯ ದೊರಕಿಸಿಕೊಡಬೇಕು. ರೆಡಿಮೇಡ್ ಬಟ್ಟೆಗಳ ಉದ್ಯಮ ತಲೆ ಎತ್ತಿರುವುದರಿಂದ ಸಮಸ್ಯೆ ಎದುರಾಗಿದೆ. ಹಾಗಾಗಿ ಬಡ ಟೈಲರ್‌ಗಳಿಗೆ ಭದ್ರತೆ ಒದಗಿಸಲು ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.
ವಾಟಾಳು ಮಠದ ಶ್ರೀ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ, ಟೈಲರ್‌ಗಳ ಸಂಘದ ತಾಲೂಕು ಅಧ್ಯಕ್ಷ ಬಿ.ಮಹದೇವ ಸ್ವಾಮಿ, ಪುರಸಭಾ ಅಧ್ಯಕ್ಷ ಟಿ.ಎ.ನಂಜುಂಡಸ್ವಾಮಿ, ಉಪಾಧ್ಯಕ್ಷೆ ನಾಗರತ್ನಾ ಮಾದೇಶ್, ಶಸ್ತ್ರಚಿಕಿತ್ಸಾ ತಜ್ಞ ಡಾ.ರೇವಣ್ಣ, ಸಂಘದ ಗೌರವಾಧ್ಯಕ್ಷ ಮಾಧುರಾಜು, ಉಪಾಧ್ಯಕ್ಷರಾದ ಎಂ.ಎಲ್.ಮಹದೇವು, ಮಹದೇವಸ್ವಾಮಿ(ಕಾರ್ತಿಕ್), ಪ್ರಧಾನ ಕಾರ್ಯದರ್ಶಿ ರಾಜಬುದ್ದಿ, ಖಜಾಂಚಿ ನಾಗರಾಜು, ನಿರ್ದೇಶಕರಾದ ಹರೀಶ್, ಮಹೇಶ್, ನಾಗರಾಜು, ನಸೀರ್, ರಂಗಸ್ವಾಮಿ, ಬಸವರಾಜು, ವಸಂತ, ಸೋಮು, ಸತೀಶ್, ಹೆಮ್ಮಿಗೆ ವೆಂಕಟೇಶ್, ನಾಗರಾಜು, ಸುರೇಶ್, ಗುರುರಾಜ್, ಶ್ರೀರಾಂಪುರ ಮಾಧು, ಸುರೇಶ್(ಸೂರಿ), ಉಪನ್ಯಾಸಕ ಕುಮಾರಸ್ವಾಮಿ ಇದ್ದರು.