ಟೈಲರ್ ಕ್ಷೇಮ ನಿಧಿ ಮಂಡಳಿ ಸ್ಥಾಪನೆಗೆ ಮನವಿ

ಟೈಲರ್ ಕ್ಷೇಮ ನಿಧಿ ಮಂಡಳಿ ಸ್ಥಾಪನೆಗೆ ಮನವಿ
Published on

ಹಾಸನ: ಟೈಲರ್ ಕ್ಷೇಮ ನಿಧಿ ಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿ ಟೈಲರ್ಸ್‌ ಅಸೋಷಿಯೇಷನ್ ಜಿಲ್ಲಾ ಸಮಿತಿಯಿಂದ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ಟೈಲರ್ಸ್‌ ಅಸೋಷಿಯೇಷನ್ 23 ವರ್ಷದ ಹಿಂದೆ ಸ್ಥಾಪನೆಯಾಗಿದ್ದು, ರಾಜ್ಯಾದ್ಯಂತ 10 ಲಕ್ಷಕ್ಕೂ ಹೆಚ್ಚು ಮಂದಿ ಹೊಲಿಗೆ ಕೆಲಸದಲ್ಲಿ ತೊಡಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರಿಗೆ ಜೀವನ ಭದ್ರತೆ ಒದಗಿಸಲು ಟೈಲರ್ಸ್‌ ಕ್ಷೇಮನಿಧಿ ಮಂಡಳಿ ರಚಿಸುವಂತೆ 22 ವರ್ಷಗಳಿಂದ ಸರ್ಕಾರವನ್ನು ಒತ್ತಾಯಿಸುತ್ತಾ ಬರಲಾಗುತ್ತಿದೆ. ಈ ಬಾರಿಯಾದರೂ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.

ಕ್ಷೇಮ ನಿಧಿ ಮಂಡಳಿ ಮೂಲಕ ಭವಿಷ್ಯ ಪಿಂಚಣಿ ಯೋಜನೆ, ಆರೋಗ್ಯ ವಿಮೆ, ನಿವೃತ್ತಿ ನಂತರ 3 ಸಾವಿರ ರೂ. ನಿವೃತ್ತಿ ವೇತನ, ಹೊಲಿಗೆ ಕೆಲಸಗಾರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ, ವಿವಾಹ ಸಹಾಯಧನ ನೀಡಬೇಕು. ಅಲ್ಲದೆ, ಲೇಬರ್ ಕಾರ್ಡ್ ನೀಡುವ ಮೂಲಕ ಟೈಲರ್‌ಗಳಿಗೆ ಮನೆ ಕಟ್ಟಿಕೊಳ್ಳಲು ಧನಸಹಾಯ, ಕಡಿಮೆ ಬಡ್ಡಿ ದರಲ್ಲಿ ಸಾಲ ಸೌಲಭ್ಯ ಒದಗಿಸಲು ಸರ್ಕಾರ ಕ್ರಮ ಕೈಗೊಂಡು ಟೈಲರ್‌ಗಳ ನೆರವಿಗೆ ಧಾವಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಮಿತಿ ಜಿಲ್ಲಾಧ್ಯಕ್ಷ ಎಚ್.ಎಸ್.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಚ್.ಎನ್.ಜಯಶೀಲಾ, ಉಪಾಧ್ಯಕ್ಷರಾದ ಯೂನಸ್, ವಿಜಯಾ, ಸಹಕಾರ್ಯದರ್ಶಿಗಳಾದ ಜಿ.ಎನ್.ಚಂದ್ರಶೇಖರ್, ಕೆ.ಸುನೀಲ್ ಕುಮಾರ್, ರೇಣುಕಾ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net