

ಹಾಸನ: ಟೈಮ್ಸ್ ಸಮೂಹ ಶಿಕ್ಷಣ ಸಂಸ್ಥೆಯಿಂದ ಹಸಿರ ಸಿರಿ ಎಂಬ ಕಾರ್ಯಕ್ರಮದಡಿ 10 ಸಾವಿರ ಗಿಡ ನೆಡುವ ಸಸ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟೈಮ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ತಿಳಿಸಿದರು.
ಸಸ್ಯೋತ್ಸವಕ್ಕೆ ಈಗಾಗಲೇ ಚಾಲನೆ ದೊರೆತಿದ್ದು, 10 ಸಾವಿರ ಗಿಡ ನೆಡುವ ಸಂಕಲ್ಪ ಮಾಡಲಾಗಿದೆ. ಜಿಲ್ಲೆಯಲ್ಲಿ ಟೈಮ್ಸ್ ಸಮೂಹದಲ್ಲಿ 9 ಸಂಸ್ಥೆಗಳಿದ್ದು, 4 ಸಾವಿರ ಮಕ್ಕಳು ಕಲಿಯುತ್ತಿದ್ದಾರೆ. ಒಬ್ಬೊಬ್ಬ ವಿದ್ಯಾರ್ಥಿಗೆ ತಲಾ ಎರಡು ಗಿಡ ವಿತರಿಸಲಾಗುವುದು. ಮಕ್ಕಳು ಮತ್ತು ಪೋಷಕರು ಗಿಡ ಪೋಷಣೆ ಮಾಡುವ ವಿಶ್ವಾಸ ಇದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದು ನನ್ನ ಬಹುವರ್ಷಗಳ ಕನಸು. ಅದನ್ನು ಈಗ ಸಾಕಾರ ಮಾಡಲಾಗುತ್ತಿದೆ. ವಿಶೇಷವಾಗಿ ಪೋಷಕರು ಆಸಕ್ತಿ ತೋರಿಸಿದರೆ ನಮ್ಮ ಶ್ರಮಕ್ಕೆ ಫಲ ಸಿಗಲಿದೆ. ಗಿಡ ಸಂಪನ್ಮೂಲ ಹೊಂದಿಕೆ ಬಗ್ಗೆ ಆಯಾಯ ವಲಯದ ಅರಣ್ಯಾಧಿಕಾರಿಗಳ ಜತೆ ಮಾತನಾಡಲಾಗಿದೆ. ಗಿಡಗಳ್ನು ಉತ್ತಮವಾಗಿ ಬೆಳೆಸಿದವರಿಗೆ ಅಭಿನಂದನಾ ಪತ್ರ ನೀಡಲಾಗುವುದು. ಟೈಮ್ಸ್ ಶಿಕ್ಷಣ ಸಮೂಹ ಸಂಸ್ಥೆ ಆಯೋಜಿಸಿರುವ ಮಹತ್ವಪೂರ್ಣ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಗಿಡ ನೆಡುವುದರ ಜೊತೆಗೆ ಮಕ್ಕಳಿಗೆ ಪರಿಸರ ಸಂರಕ್ಷಣೆ, ಹಸಿರಿನ ಮಹತ್ವದ ಅರಿವು ಮೂಡಿಸಿ, ಪರಿಸರದ ಕಾಳಜಿ ಮನವರಿಕೆ ಮಾಡಲಾಗುವುದು. ಈ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಿದರೆ, ಉತ್ಕೃಷ್ಟವಾದ ನಾಗರಿಕ ಸಮಾಜದ ನಿರ್ಮಾಣ ಮಾಡಬಹುರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಟೈಮ್ಸ್ ಸಂಸ್ಥೆಯ ಪದಾಧಿಕಾರಿಗಳಾದ ಶ್ರೀನಾಥ್, ಮಂಜುನಾಥ್ ಹಾಜರಿದ್ದರು.