

ಡಿಸಿಎಫ್ ಏಡುಕೊಂಡಲು ವರ್ಗಾವಣೆಗೆ ಸಾರ್ವಜನಿಕರ ಆಕ್ಷೇಪ
ಹನೂರು: ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ವಿ. ಏಡುಕೊಂಡಲು ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿರುವ ಹಿನ್ನಲೆಯಲ್ಲಿ ರೈತ ಸಂಘಟನೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಟೈಗರ್ ಪ್ರಾಜೆಕ್ಟ್‌ನ ಪ್ರಕ್ರಿಯೆ ಇವರ ವರ್ಗಾವಣೆಗೆ ಮುಳುವಾಯಿತೇ? ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.
ಈ ಹಿಂದೆ ಡಿಸಿಎಫ್ ಏಡುಕೊಂಡಲು ಅವರು ಮೈಸೂರು ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದು, 2018ರ ಮಾರ್ಚ್‌ನಲ್ಲಿ ಕೊಳ್ಳೇಗಾಲ ಉಪ ವಿಭಾಗದ ಮಲೆಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಅರಣ್ಯ ಉಪ ಸಂರಕ್ಷಣಾಧಿಕಾರಿಯಾದರು. ರೈತರು, ಕಾಡಂಚಿನಲ್ಲಿ ವಾಸಿಸುವ ಜನರು ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಒಡನಾಟವನ್ನು ಹೊಂದುವುದರ ಮೂಲಕ ಸೌಹಾರ್ದ ಸಂಬಂಧ ಬೆಳೆಸಿಕೊಂಡಿದ್ದರು. ಈ ದಿಸೆಯಲ್ಲಿ ಜನರ ಸಹಕಾರ ಪಡೆದು ಅರಣ್ಯ ಸಂರಕ್ಷಣೆಗೆ ಮುಂದಾಗಿದ್ದರು. ಅಲ್ಲದೇ ಸ್ಥಳೀಯ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಅಗರಬತ್ತಿ, ಬಿದಿರು ಘಟಕ, ಜೇನುತುಪ್ಪ ಘಟಕ ಸ್ಥಾಪನೆ ಸೇರಿದಂತೆ ಸಾಮೂಹಿಕ ಬೇಸಾಯಕ್ಕೆ ಅವಕಾಶ ಕಲ್ಪಿಸಿದ್ದರು. ಇನ್ನು ಚಂಗಡಿ ಗ್ರಾಮ ಸ್ಥಳಾಂತರ ಸಂಬಂಧ ಪುನರ್ವಸತಿ ಕಲ್ಪಿಸಲು ಹೆಚ್ಚಿನ ಶ್ರಮ ವಹಿಸಿದ್ದರು.
ಈ ಬಗ್ಗೆ ಜನರಿಂದ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಅವರು ಜನರಿಗೆ ಅನುಕೂಲವಾಗುವಂತೆ ಹಲವು ಕಾರ್ಯ ಮಾಡಿದ್ದರು. ಜನರಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದರು. ಹಲವು ತಿಂಗಳಿನಿಂದ ಇವರ ವರ್ಗಾವಣೆ ಬಗ್ಗೆ ಅಲ್ಲಲ್ಲಿ ಗುಸುಗುಸು ಮಾತು ಕೇಳಿ ಬರುತ್ತಿದ್ದವು. ಈ ಹಿನ್ನಲೆ ರೈತ ಸಂಘಟನೆಗಳು ಇವರನ್ನು ವರ್ಗಾಯಿಸದಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.
ಡಿಸಿಎಫ್ ಏಡುಕೊಂಡಲು ಅವರನ್ನು ಬುಧವಾರ ಕೋಲಾರಕ್ಕೆ ವರ್ಗಾಯಿಸಿ ತೆರೆವಾದ ಸ್ಥಾನಕ್ಕೆ ಬಿಆರ್‌ಟಿ ಹುಲಿ ಯೋಜನೆ ನಿರ್ದೇಶಕ ಡಾ.ಜಿ ಸಂತೋಷ್‌ಕುಮಾರ್ ಅವರನ್ನು ನಿಯೋಜಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಎಚ್.ಆರ್ ಅನುರಾಧಾ ಅವರು ಆದೇಶ ಹೊರಡಿಸಿದ್ದಾರೆ. ಈ ದಿಢೀರ್ ವರ್ಗಾವಣೆಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಟೈಗರ್ ಪ್ರಾಜೆಕ್ಟ್ ಕಾರಣವೇ?
ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವಾಗಿ ಘೋಷಿಸಿಲು ಸರ್ಕಾರ ಮುಂದಾಗಿತ್ತು. ಈ ನಿಟ್ಟಿನಲ್ಲಿ ಏಡುಕೊಂಡಲು ಉತ್ತಮ ಕಾರ್ಯ ನಿರ್ವಹಿಸಿದ್ದರು. ಆದರೆ ಈ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಕ್ಷೇತ್ರದ ಜನರು ಹುಲಿ ಯೋಜನೆ ರದ್ದುಗೊಳಿಸಲು ಅಗತ್ಯ ಕ್ರಮವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಮಾಡಿದ್ದರು. ಪೊನ್ನಾಚಿ ಗ್ರಾಮದಲ್ಲಿ ಆ. 3ರಂದು ನಡೆದ ಸಾಲೂರು ಬೃಹನ್ಮಠದ ಹಿರಿಯ ಶ್ರೀ ಗುರುಸ್ವಾಮೀಜಿ ಅವರ ಗುರುವಂದನಾ ಕಾರ್ಯಕ್ರಮದಲ್ಲಿ ಹುಲಿ ಯೋಜನೆ ಘೋಷಣೆ ಬಗ್ಗೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಅಗತ್ಯ ಕ್ರಮವಹಿಸಬೇಕೆಂದು ಸಚಿವ ವಿ.ಸೋಮಣ್ಣ ಅವರು ಏಡುಕೊಂಡಲು ಅವರಿಗೆ ಸೂಚನೆ ನೀಡಿದ್ದರು.
ಕಳೆದ ಮೂರು ದಿನಗಳ ಹಿಂದೆ ಮಲೆಮಹದೇಶ್ವರ ವನ್ಯಜೀವಿ ಧಾಮಕ್ಕೆ ಭೇಟಿ ನೀಡಿದ್ದ ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಹುಲಿ ಯೋಜನೆಯನ್ನು ಘೋಷಣೆ ಮಾಡುತ್ತೇವೆ ಎಂದಿದ್ದರು. ಈ ಇಬ್ಬರು ಸಚಿವರ ನಿರ್ಧಾರದಿಂದ ಗೊಂದಲ ಉಂಟಾಗಿದ್ದು, ಇದರಿಂದ ಇವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಮಾತು ಕೇಳಿಬಂದಿದೆ.