ಟೈಕಾನ್ ಶೃಂಗಸಭೆ ಫೆ. 1ರಿಂದ

h10-Tiecon
Published on

ಹುಬ್ಬಳ್ಳಿ: ದಿ ಇಂಡಸ್ ಎಂಟರ್​ಪ್ರೀನರ್ಸ್ (ಟಿಇಇ) ವತಿಯಿಂದ ಟೈಕಾನ್ 2020- ಉದ್ಯಮಶೀಲತಾ ಶೃಂಗಸಭೆಯನ್ನು ಇಲ್ಲಿನ ಹೋಟೆಲ್ ಡೆನಿಸನ್ಸ್​ನಲ್ಲಿ ಫೆ. 1 ಮತ್ತು 2ರಂದು ಆಯೋಜಿಸಲಾಗಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಟೈಕಾನ್ ಅಧ್ಯಕ್ಷ ಶಶಿಧರ ಶೆಟ್ಟರ್, ಫೆ. 1ರಂದು ಮಹಿಳಾ ಸಮಾವೇಶ ಆಯೋಜಿಸಲಾಗಿದೆ. ಅದೇ ದಿನ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ ಮತ್ತಿತರರು ಪಾಲ್ಗೊಳ್ಳುವರು ಎಂದರು.

ಮೊದಲ ದಿನದ ಮಹಿಳಾ ಸಮಾವೇಶದಲ್ಲಿ ಜಾಗರಣ್ ಪ್ರಕಾಶನ ಲಿಮಿಟೆಡ್ ಅಧ್ಯಕ್ಷೆ ಅಪೂರ್ವಾ ಪುರೋಹಿತ, ಗ್ಲೋಬಲ್ ಅಡ್ಜಸ್ಟ್​ಮೆಂಟ್ ಫೌಂಡೇಷನ್ ಸ್ಥಾಪಕ ಅಧ್ಯಕ್ಷೆ ಡಾ. ರಂಜಿನಿ ಮಣಿಯನ್, ದುಬೈನ ಸೆಂಚುರಿ ಫೈನಾನ್ಸಿಯಲ್​ನ ಸುಷ್ಮಿತಾ ದಿವಾಂಜಿ, ಉದ್ಯಮಿ ಕನಿಕಾ ತೆಕ್ರಿವಾಲ್ ಮತ್ತಿತರರು ಪಾಲ್ಗೊಳ್ಳುವರು.

2ನೇ ದಿನದ ಕಾರ್ಯಕ್ರಮದಲ್ಲಿ ದೇಶದ ವಿವಿಧೆಡೆಯಿಂದ ಯಶಸ್ವಿ ಉದ್ಯಮಿಗಳು ಪಾಲ್ಗೊಂಡು, ತಮ್ಮ ಸಾಧನೆಯ ಕುರಿತು ಮಾತನಾಡುವರು. ಯೋಗಗುರು ಬಾಬಾ ರಾಮದೇವ ಗುರೂಜಿ, ಟಾಟಾ ಕಾಫಿ ಲಿಮಿಟೆಡ್ ಅಧ್ಯಕ್ಷ ಹರೀಶ ಭಟ್, ಜಿಎಂಆರ್ ಸಮೂಹದ ಸ್ಥಾಪಕ ಜಿ.ಎಂ. ರಾವ್, ಕ್ಯಾವಿನ್​ಕೇರ್ ಸ್ಥಾಪಕ ಸಿ.ಕೆ. ರಂಗನಾಥನ್, ಘೋಡಾವತ್ ಇಂಡಸ್ಟ್ರೀಸ್ ಇಂಡಿಯಾ ಲಿ. ಅಧ್ಯಕ್ಷ ಸಂಜಯ ಗೋಡಾವತ್, ಲೇಖಕ ಶಿವ ಖೇರಾ, ಆದಿತ್ಯ ಬಿರ್ಲಾ ಸನ್​ಲೈಫ್​ನ ಎಂಡಿ ಎ. ಬಾಲಸುಬ್ರಮಣ್ಯಂ, ಗ್ರಾಹಕ ಸೇವಾ ಕೂಲಂಕಷ ವಿಭಾಗದ ಮುಖ್ಯಸ್ಥ ಡಿ. ರಮೇಶಕುಮಾರ, ಭಾರತೀಯ ನೌಕಾಪಡೆಯ ಸಿಡಿಆರ್ ಅನಿಲ ಗುಡಿ, ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ ಮತ್ತಿತರರು ಭಾಗವಹಿಸುವರು.

6 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಸಂಜೆ 6ರಿಂದ ರಾತ್ರಿ 8ರವರೆಗೆ ನಡೆಯಲಿರುವ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

ಟೈ ಎಕ್ಸ್​ಲೆನ್ಸ್ ಅವಾರ್ಡ್ ವಿತರಿಸಲು ನಿರ್ಧರಿಸಲಾಗಿದೆ. ಸೇವಾ ಕ್ಷೇತ್ರ, ಉತ್ಪಾದನೆ, ಕೈಗಾರಿಕೆ, ಅತ್ಯುತ್ತಮ ಮಹಿಳಾ ಉದ್ಯಮಿ, ಉತ್ತಮ ತಂತ್ರಜ್ಞಾನ ಮತ್ತಿತರ ವಿಭಾಗಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ವಿತರಿಸಲಾಗುವುದು. ಜ. 15ರೊಳಗೆ ಹೆಸರು ನೋಂದಾಯಿಸಬೇಕು. ಮಾಹಿತಿಗೆ ರೋಹನ ಕುಲಕರ್ಣಿ (93424 12110) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಟೈಕಾನ್ ಸಂಯೋಜಕ ವಿಜೇಶ ಸೈಗಲ್ ಹಾಗೂ ಮಹಿಳಾ ಘಟಕದ ಸಂಯೋಜಕಿ ಶ್ರಾವಣಿ ಪವಾರ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಟೈಕಾನ್ 2020ರ ಕರಪತ್ರ ಬಿಡುಗಡೆಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net