

ಮಾಸ್ತಿ: ಮಾಲೂರು- ಬಂಗಾರಪೇಟೆ ಮಾರ್ಗದಲ್ಲಿ ಟೇಕಲ್ ರೈಲು ನಿಲ್ದಾಣ ಬಳಿ ವಾಹನಗಳ ಓಡಾಟಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ 2 ತಿಂಗಳಲ್ಲಿ ಮೇಲ್ಸೇತುವೆ ಟೆಂಡರ್ ಪ್ರಕ್ರಿಯೆ ಮುಗಿಯಲಿದ್ದು, ನಂತರ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ಟೇಕಲ್ ರೈಲು ನಿಲ್ದಾಣಕ್ಕೆ ನೈರುತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕ ಸಂಜೀವ್ಕಿಶೋರ್ ಜತೆ ಶನಿವಾರ ಆಗಮಿಸಿ ಪರಿಶೀಲಿಸಿದ ನಂತರ ಮಾತನಾಡಿ, ರಸ್ತೆ ಮೇಲ್ಸೇತುವೆ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ನಿತ್ಯ 60 ರಿಂದ 70 ರೈಲುಗಳು ಈ ಮಾರ್ಗದಲ್ಲಿ ಓಡಾಡುತ್ತಿದ್ದು, ರಾಜ್ಯದಲ್ಲೇ ಹೆಚ್ಚು ರೈಲುಗಳು ಸಂಚರಿಸುವ ಮಾರ್ಗ ಇದಾಗಿದೆ. ಹೀಗಾಗಿಯೇ ರೈಲುಗಳು ಬಂದಾಗಲೆಲ್ಲ ಪದೇ ಪದೇ ಗೇಟು ಹಾಕುವುದರಿಂದ ತುರ್ತಾಗಿ ಹೋಗಬೇಕಾದ ಜನರು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿತ್ತು. ಅವಸರದಲ್ಲಿ ಕೆಲವರು ನಡೆದು ರೈಲು ಮಾರ್ಗವನ್ನು ದಾಟುತ್ತಿದ್ದಾಗ ಹಲವು ಬಾರಿ ಅಪಘಾತಗಳಾಗಿವೆ. ಹೀಗಾಗಿ ಮೇಲ್ಸೇತುವೆ ನಿಮಾರ್ಣ ಅನಿವಾರ್ಯವಾಗಿದ್ದು, ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇದಕ್ಕೂ ಮುನ್ನ ನೈರುತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕ ಸಂಜೀವ್ಕಿಶೋರ್ಗೆ ಸಾರ್ವಜನಿಕರು ಮನವಿ ಸಲ್ಲಿಸಿ, ರೈಲು ಅಪಘಾತಗಳನ್ನು ತಡೆಯಲು ನಿಲ್ದಾಣದಲ್ಲಿ ನಿಲ್ದಾಣಾಧಿಕಾರಿಗಳು ಧ್ವನಿವರ್ಧಕದ ಮೂಲಕ ಹೇಳಬೇಕು. ನಿಲ್ದಾಣದಲ್ಲಿ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ರೈಲ್ವೇ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಬೆಳಗ್ಗೆ ಸಂಚರಿಸುವ ಶೇಷಾದ್ರಿ ಎಕ್ಸ್ಪ್ರೆಸ್ ನಿಲುಗಡೆ ಆಗಬೇಕು. ಮೇಲ್ಸೇತುವೆ ಇಲ್ಲದಿರುವುದರಿಂದ ಗೇಟ್ ಹಾಕಿದರೆ ಅರ್ಧ ಗಂಟೆಗೂ ಹೆಚ್ಚು ಹೊತ್ತು ತೆಗೆಯುವುದಿಲ್ಲ. ಹೀಗಾಗಿ ಮೇಲ್ಸೇತುವೆ ನಿಮಾರ್ಣ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಸಂಜೀವ್ಕಿಶೋರ್, ಬೇಡಿಕೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಹಂತ ಹಂತವಾಗಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಮರಲಹಳ್ಳಿ ನಿಲ್ದಾಣಕ್ಕೂ ಭೇಟಿ: ಸಂಸದ ಮುನಿಸ್ವಾಮಿ ಮರಲಹಳ್ಳಿಯಲ್ಲಿ ರೈಲು ನಿಲ್ದಾಣಕ್ಕೂ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿದರು. ಎರಡು ವರ್ಷದಿಂದ ರೈಲುಗಳು ನಿಲುಗಡೆಯಾಗದೆ ಈ ಭಾಗದ ಜನರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಮುನಿಸ್ವಾಮಿ, ಇಂದಿನಿಂದಲೇ 4 ರೈಲುಗಳನ್ನು ನಿಲುಗಡೆ ಮಾಡಲು ಅಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿಸಿದರು.