

ಹುಬ್ಬಳ್ಳಿ: ವಾಹನಗಳ ನೋಂದಣಿ ಸಂಖ್ಯೆಯು ಆಯಾ ದೇಶದೊಳಗೆ ಸಂಚಾರಕ್ಕೆ ಸೀಮಿತವಾಗಿರುತ್ತದೆ. ಅನ್ಯ ದೇಶಗಳಲ್ಲಿ ಬಳಕೆಯಲ್ಲಿ ಇರುವುದಿಲ್ಲ. ಟೆಸ್ಲಾ ಕಾರಿನ ಮಾಲೀಕ, ಲಂಡನ್ ನಿವಾಸಿಯೊಬ್ಬರು ತಮ್ಮ ವಾಹನಕ್ಕೆ ಹುಬ್ಬಳ್ಳಿಯ ನೋಂದಣಿ ಸಂಖ್ಯೆ ಹೊಂದಿರುವುದು ಗಮನ ಸೆಳೆದಿದೆ.
ಮೂಲತಃ ಹುಬ್ಬಳ್ಳಿಯವರಾದ ಸಂದೀಪ ಹೊಸಕೋಟಿ ಲಂಡನ್ನಲ್ಲಿ ಬ್ಯಾಂಕರ್ ಆಗಿದ್ದಾರೆ. 2009ರಿಂದ ಅವರು ಲಂಡನ್ನಲ್ಲಿ ನೆಲೆಸಿದ್ದಾರೆ. ಅವರ ಟೆಸ್ಲಾ ಕಾರು ಕೆಎ 25 ಎಚ್ಬಿಎಲ್ ಎಂಬ ನಂಬರ್ ಪ್ಲೇಟ್ ಹೊಂದಿರುವುದು ಹುಬ್ಬಳ್ಳಿಯಲ್ಲಿ ಸಂಚಲನ ಮೂಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಟೆಸ್ಲಾ ಕಾರ್ ಖರೀದಿಸುವ ಮುನ್ನವೇ ಒಂದು ವರ್ಷದ ಹಿಂದೆಯೇ ಇದೇ (ಕೆಎ 25 ಎಚ್ಬಿಎಲ್) ನೋಂದಣಿ ಸಂಖ್ಯೆ ಬೇಕೆಂದು ಬಿಡ್ ಮಾಡಿದ್ದೆ. ಇದೇ ವರ್ಷ ಮಾರ್ಚ್ನಲ್ಲಿ ಟೆಸ್ಲಾ ಕಾರು ಖರೀದಿಸಿದ್ದೇನೆ. ಲಂಡನ್ನ ಡಿವಿಎಲ್ಎ (ಡ್ರೖೆವರ್ ಆಂಡ್ ವೆಹಿಕಲ್ ಲೈಸೆನ್ಸಿಂಗ್ ಏಜೆನ್ಸಿ) ನನ್ನ ಆಯ್ಕೆಯ ನೋಂದಣಿ ಸಂಖ್ಯೆ ನೀಡಿದೆ. ಯಾವುದೇ ಹೆಚ್ಚಿನ ಬೆಲೆ ನೀಡದೆ ಹಾಗೂ ಕಿರಿಕಿರಿ ಇಲ್ಲದೆ ನನ್ನ ಆಯ್ಕೆಯ ನಂಬರ್ ಪಡೆದಿದ್ದೇನೆ ಎಂದು ಸಂದೀಪ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಾನು ಮಣಿಪಾಲದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ನನ್ನ ಬೈಕ್ ನೋಂದಣಿ ಸಂಖ್ಯೆ ಕೆಎ 25 ನಿಂದ ಆರಂಭಗೊಂಡಿತ್ತು. ಕೆಲಸದ ನಿಮಿತ್ತ ಹುಬ್ಬಳ್ಳಿಯಿಂದ ಹೊರಗೆ ಇರುವ ನನಗೆ ಈ ನೋಂದಣಿ ಸಂಖ್ಯೆ (ಕೆಎ 25 ಎಚ್ಬಿಎಲ್) ಹುಬ್ಬಳ್ಳಿಯಲ್ಲಿ ಇರುವಂತೆ ಫೀಲ್ ಕೊಡುತ್ತದೆ ಎಂದು ಸಂದೀಪ ತಿಳಿಸಿದ್ದಾರೆ.
ಸಂದೀಪ ಅವರು ಲಂಡನ್ನಲ್ಲಿ ಚೆಮ್ಸಫೋರ್ಡ್ ಕನ್ನಡಿಗರು ಎಂಬ ಸಂಸ್ಥೆಯ ಸದಸ್ಯರಾಗಿದ್ದಾರೆ. ಈ ಸಂಘಟನೆಗೆ ಕರ್ನಾಟಕ ರಾಜ್ಯೋತ್ಸವ ಹಾಗೂ ಯುಗಾದಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬಂದಿದೆ.
ಹುಬ್ಬಳ್ಳಿಯ ಜಿ.ವಿ. ಜೋಶಿ ರೋಟರಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಜೆ.ಜಿ. ಕಾಮರ್ಸ್ ಕಾಲೇಜಿನಲ್ಲಿ ಪದವಿ ಬಳಿಕ ಮಣಿಪಾಲದಲ್ಲಿ ಬಿಬಿಎ ವ್ಯಾಸಂಗ ಮಾಡಿದ್ದರು.