ಟೆನೆಂಟ್ ಕೋ ಆಪ್ ಸೊಸೈಟಿಗೆ ನೋಟಿಸ್ ನೀಡಲು ಸೂಚನೆ

DC Nitesh Patil
Published on

ಧಾರವಾಡ: ತಾಲೂಕಿನ ಕುಂಬಾರಕೊಪ್ಪ ಗ್ರಾಮದ ಟೆನೆಂಟ್ ಕೋ ಆಪರೇಟಿವ್ ಸೊಸೈಟಿಯು 1200 ಎಕರೆ ಜಮೀನು ನಿರ್ವಹಣೆಯಲ್ಲಿ ಅನುಸರಿಸಿರುವ ಕ್ರಮ ಕುರಿತು ವರದಿ ನೀಡಲು 4 ಬಾರಿ ಪತ್ರ ಬರೆದಿದ್ದರೂ ನಿರ್ಲಕ್ಷ್ಯ ವಹಿಸಿದೆ. ಸಂಸ್ಥೆ ಪದಾಧಿಕಾರಿಗಳ ವಿರುದ್ಧ ಪ. ಜಾತಿ/ಪ. ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿ ಏಕೆ ಕ್ರಮ ಜರುಗಿಸಬಾರದು ಎಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚಿಸಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಸ್ಥೆಯು ಸಮಿತಿಗೆ ಅಗೌರವ ತೋರಿದ್ದರಿಂದ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಮಳಿಗೆಗಳ ಹಂಚಿಕೆ ಹಾಗೂ ನೌಕರರ ನೇಮಕಾತಿಯಲ್ಲಿ ರೋಸ್ಟರ್ ಪಾಲನೆ ಕುರಿತು ಸಮಿತಿಗೆ ಮಾಹಿತಿ ನೀಡಲು ಕವಿವ ಸಂಘದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಮಾತನಾಡಿ, ಪ.ಜಾ., ಪ.ಪಂ. ದೌರ್ಜನ್ಯ ತಡೆ ಕಾಯ್ದೆ ಪ್ರಕರಣಗಳಲ್ಲಿ ಡಿವೈಎಸ್ಪಿ ದರ್ಜೆ ಅಧಿಕಾರಿಗಳು ತನಿಖಾಧಿಕಾರಿ ಆಗಿರುತ್ತಾರೆ. ಯಾವುದೇ ಪ್ರಭಾವಕ್ಕೆ ಒಳಗಾಗದಿರಲಿ ಎಂಬ ಉದ್ದೇಶದಿಂದ ಸರ್ಕಾರ ಈ ಆದೇಶ ಹೊರಡಿಸಿದೆ ಎಂದರು.

ಕಲಘಟಗಿ ತಾಲೂಕಿನಲ್ಲಿ 10 ವರ್ಷಗಳ ಅವಧಿಗೆ 6 ಜನರಿಗೆ ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲಾಗಿದೆ. ಈ ಪ್ರಮಾಣ ಪತ್ರ ಹೊಂದಿರುವವರು ಬೇಡ ಜಂಗಮ ಜಾತಿಗೆ ಸೇರಿಲ್ಲ ಎಂದು ದೃಢಪಟ್ಟಿರುವುದರಿಂದ ಅವರ ಪ್ರಮಾಣ ಪತ್ರ ರದ್ದುಪಡಿಸಲು ಕೋರಿ ಉಪವಿಭಾಗಾಧಿಕಾರಿಗೆ ಮನವಿ ಮಾಡಲಾಗಿದೆ ಎಂದು ಕಲಘಟಗಿ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಮಾಹಿತಿ ನೀಡಿದರು.

ಸಮಿತಿ ಸದಸ್ಯರಾದ ಅಶೋಕ ದೊಡ್ಡಮನಿ, ಸಿದ್ದಲಿಂಗಪ್ಪ ಕರೆಮ್ಮನವರ, ಸಫಾಯಿ ಕರ್ಮಚಾರಿಗಳ ಕಲ್ಯಾಣ ಸಮಿತಿ ಸದಸ್ಯ ಲಕ್ಷ್ಮಣ ಬಕ್ಕಾಯಿ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಮಾತನಾಡಿದರು.

ಪೊಲೀಸ್ ಆಯುಕ್ತ ಆರ್.ದಿಲೀಪ್, ಉಪಪೊಲೀಸ್ ಆಯುಕ್ತ ಆರ್.ಬಿ. ಬಸರಗಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್.ಆರ್.ಪುರುಷೋತ್ತಮ, ಸಮಿತಿ ಸದಸ್ಯರಾದ ಕಾಡಯ್ಯ ಹೆಬ್ಬಳ್ಳಿಮಠ, ಇಂದುಮತಿ ಶಿರಗಾಂವ್, ಇಸಾಬೆಲ್ಲಾ ಕ್ಸೇವಿಯರ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net