ಟೆಟ್ರಾಪ್ಯಾಕ್​ ಟೆಂಡರ್​ ನನ್ನೊಬ್ಬನ ತೀಮಾರ್ನವಲ್ಲ : ಕೋಚಿಮುಲ್​ ಅಧ್ಯಕ್ಷ ನಂಜೇಗೌಡ ಸ್ಪಷ್ಟನೆ, 6 ಕೋಟಿ ರೂ. ನಷ್ಟ ಆರೋಪದ ಹಿಂದಿದೆ ಕೈವಾಡ

2
Published on
ಕೋಲಾರ: ಟೆಟ್ರಾಪ್ಯಾಕ್​ ಮತ್ತು ಪ್ರೀಪ್ಯಾಕ್​ ಹಾಲಿನ ಟೆಂಡರ್​ ನಿರ್ವಹಣೆಯಲ್ಲಿ ತಿಂಗಳಿಗೆ 50ಲಕ್ಷ ರೂ. ಹೆಚ್ಚುವರಿಯಾಗಿ ನೀಡುತ್ತಿದ್ದು, ಇದರಿಂದ ಕೋಲಾರ &ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ವಾರ್ಷಿಕ 6 ಕೋಟಿ ರೂ. ನಷ್ಟವಾಗುತ್ತಿದೆ ಎಂದು ಒಕ್ಕೂಟದ ನಿರ್ದೇಶಕ ವಿ.ಮಂಜುನಾಥರೆಡ್ಡಿ ಆರೋಪಿಸಿರುವುದರಲ್ಲಿ ಸತ್ಯಾಂಶವಿಲ್ಲ ಎಂದು ಶಾಸಕ ಹಾಗೂ ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಸ್ಪಷ್ಟಪಡಿಸಿದರು.
ಸರಿಯಾದ ಮಾಹಿತಿ ಪಡೆಯದೆ, ದುರುದ್ದೇಶದಿಂದ ನನ್ನ ವಿರುದ್ಧ ಆರೋಪಿಸಲಾಗಿದೆ. ಹಾಲನ್ನು ಟೆಟ್ರಾಪ್ಯಾಕ್​ ಮಾಡಿ ಮಾರಾಟ ಮಾಡುವ ಗುತ್ತಿಗೆ ಒಂದೂವರೆ ವರ್ಷದ ಹಿಂದೆ ನೀಡಿದ್ದು, ಆಗ ಸುಮ್ಮನಿದ್ದು, ಈಗೇಕೆ ಆರೋಪ ಮಾಡಲಾಗಿದೆ? ಇಷ್ಟಕ್ಕೂ ಟೆಂಡರ್​ ವಿಚಾರ ನನ್ನೊಬ್ಬನ ತೀಮಾರ್ನವಲ್ಲ. ನಿರ್ದೇಶಕರ ಒಪ್ಪಿಗೆ ಮೇರೆಗೆ ತೆಗೆದುಕೊಂಡಿರುವ ನಿರ್ಧಾರ. ಒಂದು ವೇಳೆ ಅಕ್ರಮವನ್ನು ಮಂಜುನಾಥರೆಡ್ಡಿ ಸಾಬೀತುಪಡಿಸಿದರೆ ನಾನೊಬ್ಬನಲ್ಲ, ಎಲ್ಲ ನಿರ್ದೇಶಕರೂ ರಾಜೀನಾಮೆ ನೀಡುತ್ತೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಟೆಂಡರ್​ದಾರರಿಗೆ ಪ್ರತಿ ಲೀಟರ್​ ಹಾಲಿಗೆ ಚಾಮರಾಜನಗರ ಒಕ್ಕೂಟ 1.12ರೂ. ಪಾವತಿಸುತ್ತಿದ್ದು, ಹಾಸನ ಒಕ್ಕೂಟ 95.5 ಪೈಸೆ, ಮದರ್​ಡೇರಿ 2.76ರೂ., ಕೋಚಿಮುಲ್​ 91 ಪೈಸೆ ಪಾವತಿಸುತ್ತಿದೆ. ಈ ಹಿಂದೆ ಒಕ್ಕೂಟದಿಂದಲೇ ಪ್ಯಾಕ್​ ಮಾಡುತ್ತಿದ್ದಾಗ ಸಿಬ್ಬಂದಿಗೆ ವೇತನ ನೀಡುತ್ತಿದ್ದೆವು. ಈಗ ಗುತ್ತಿಗೆದಾರರೇ ಸಿಬ್ಬಂದಿ ನೇಮಿಸಿಕೊಂಡಿದ್ದು, ಹಾಲು ಕೆಡುವುದು, ಮಾರಾಟವಾಗದೆ ಉಳಿದರೆ ಅವರೇ ಹೊಣೆಯಾಗುತ್ತಾರೆ. ಹೀಗಾಗಿ ಒಕ್ಕೂಟದಿಂದ ವಾರ್ಷಿಕ ಪಾವತಿಸುವ 6 ಕೋಟಿ ರೂ. ನಷ್ಟವಾಗುತ್ತಿದೆ ಎಂದರೆ ಅದಕ್ಕೆ ಅರ್ಥವಿಲ್ಲ. ಆರೋಪದ ಹಿಂದೆ ಯಾರದೋ ಕೈವಾಡವಿದೆ ಎಂದು ತಿಳಿಸಿದರು.
ಟೆಟ್ರಾಪ್ಯಾಕ್​ ಯಂತ್ರಗಳನ್ನು ಸ್ವೀಡನ್​ನಿಂದ ಗುತ್ತಿಗೆದಾರರು ತರಿಸಿಕೊಂಡಿದ್ದಾರೆ. ಯಂತ್ರಗಳ ನಿರ್ವಹಣೆಗೆ ನುರಿತ ಕೆಲಸಗಾರರು ಬೇಕಾಗುತ್ತದೆ. ಅಂತಹವರು ನಮ್ಮಲ್ಲಿಲ್ಲ. ಒಕ್ಕೂಟಕ್ಕೆ 685 ಹುದ್ದೆ ಮಂಜೂರಾಗಿದ್ದರೂ ಪ್ರಸ್ತುತ 358 ಸಿಬ್ಬಂದಿ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಲ್ಲಿ 144 ತಾಂತ್ರಿಕ ಸಿಬ್ಬಂದಿ, 357 ಹುದ್ದೆ ಖಾಲಿ ಇವೆ. ಗುತ್ತಿಗೆ ಆಧಾರದಲ್ಲಿ 2 ಸಾವಿರ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಕ್ಕೂಟದಿಂದ 4 ಲಕ್ಷ ಲೀಟರ್​ ಹಾಲು ಆಂಧ್ರದ ವಿಜಯವಜ್ರ ಮತ್ತು ತೆಲಂಗಾಣದ ಆರೋಗ್ಯಲಕ್ಷಿ$್ಮ ಬ್ರಾಂಡ್​ನಲ್ಲಿ ಸರಬರಾಜು ಮಾಡಲು ಕೆಎಂಎಫ್​ ಗುರಿ ನಿಗದಿಪಡಿಸಿದೆ ಎಂದರು.
ನಿರ್ದೇಶಕ ಕಾಡೇನಹಳ್ಳಿ ನಾಗರಾಜ್​ ಮಾತನಾಡಿ, ಕರೊನಾ ಸಂಕಷ್ಟ ಕಾಲದಲ್ಲಿ ಒಕ್ಕೂಟ 30 ಕೋಟಿ ರೂ. ನಷ್ಟದಲ್ಲಿತ್ತು. ಆದರೀಗ ಲಾಭದಲ್ಲಿದ್ದು, ರೈತರಿಗೆ ಲೀಟರ್​ ಹಾಲಿಗೆ 3ರೂ. ಹೆಚ್ಚಿಗೆ ನೀಡಲಾಗುತ್ತಿದೆ. ಒಕ್ಕೂಟದಲ್ಲಿ 30 ವರ್ಷದಷ್ಟು ಹಳೆಯ ಯಂತ್ರಗಳಿದ್ದು, ಯಾವಾಗ ಬೇಕಾದರೂ ನಿಷ್ಕ್ರಿಯವಾಗಬಹುದು ಎಂದರು.
ನಿದೇಶಕರಾದ ಕಾಡೇನಹಳ್ಳಿ ನಾಗರಾಜ್​, ಅಂಬರೀಶ್​, ಆದಿನಾರಾಯಣರೆಡ್ಡಿ, ಅಶ್ವತ್ಥನಾರಾಯಣ ಬಾಬು, ಹನುಮೇಶ್​, ಶ್ರೀನಿವಾಸ್​, ವೆಂಕಟೇಶ್​ ಇದ್ದರು.

ಒಕ್ಕೂಟ ವಿಭಜನೆಗೆ ಎಲ್ಲ ನಿರ್ದೇಶಕರೂ ತಾತ್ವಿಕ ಒಪ್ಪಿಗೆ ನೀಡಿದ್ದರು. 1800 ಸಂಘಗಳಲ್ಲಿ 1400 ಸಂಘಗಳು ವಿಭಜನೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಮೆಘಾಡೇರಿ ಸ್ಥಾಪನೆಗೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ 130 ಕೋಟಿ ರೂ. ಮಂಜೂರು ಮಾಡಿಸಿದ್ದರು. ಟೆಂಡರ್​ ಸಹ ಆಗಿತ್ತು. ಆದರೆ ಸರ್ಕಾರ ಬದಲಾಗಿದ್ದರಿಂದ ಎಂ.ವಿ.ಕೃಷ್ಣಪ್ಪ ಡೇರಿ ನಿಮಾರ್ಣಕ್ಕೆ ಚಿಕ್ಕಬಳ್ಳಾಪುರ ಕಡೆಯ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ. 3 ವರ್ಷದಿಂದ ಕೇಳುತ್ತಿದ್ದರೂ ಸರ್ಕಾರ ಹಾಲಿನ ಬೆಲೆ ಹೆಚ್ಚಿಸಿಲ್ಲ. ವಿಧಾನಸಭಾ ಅಧಿವೇಶನದಲ್ಲಿ ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ. ಆಗಾಗಿ ಹೋರಾಟ ಹಾದಿ ಹಿಡಿಯುವುದು ಅನಿವಾರ್ಯ. ಕೆ.ವೈ.ನಂಜೇಗೌಡ, ಕೋಚಿಮುಲ್​ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net