

ಕುಣಿಗಲ್: ನಾವೀನ್ಯತೆಯ ಯುಗದಲ್ಲಿ ಸೃಜನಶೀಲ ಶಿಕ್ಷಣ ಪಡೆಯಬೇಕು. ವಾಣಿಜ್ಯ, ಉತ್ಪಾದನೆ, ವ್ಯಾಪಾರ, ಸೇವಾ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಅಳವಡಿಸಿ, ಟೆಕ್ ಪ್ರತಿಭೆಗಳನ್ನು ಸೃಜಿಸುತ್ತಿದೆ. ಕೃತಕ ಬುದ್ಧಿಮತ್ತೆಯು ಜಗತ್ತನ್ನು ಆವರಿಸಿ ವಿನೂತನ ಆವಿಷ್ಕಾರಗಳಿಗೆ ಹೆದ್ದಾರಿಯಾಗಿದೆ ಎಂದು ತುಮಕೂರು ವಿವಿ ವಾಣಿಜ್ಯಶಾಸ್ತ್ರ ಅಧ್ಯಯನ ಸಂಶೋಧನ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಪಿ.ಪರಮಶಿವಯ್ಯ ತಿಳಿಸಿದರು.
ಪಟ್ಟಣದ ಶನಿವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗ ಆಯೋಜಿಸಿದ್ದ ಫಿನ್ಟೆಕ್ ಸರ್ವೀಸಸ್ ಕುರಿತ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಭಾರತವು ವಿಶ್ವದ ಟೆಕ್ ಪ್ರತಿಭೆಗಳ ಹಾಗೂ ಜಗತ್ತಿನ ನಾವೀನ್ಯತೆಯ ರಾಜಧಾನಿಯಾಗಿದೆ. ಇದರಿಂದ ನುರಿತ ಪ್ರತಿಭೆಗಳಿಗೆ ಅತಿ ಹೆಚ್ಚಿನ ಉದ್ಯೋಗಾವಕಾಶಗಳು ದೊರಕುತ್ತಿವೆ. ಭಾರತವು ಜಾಗತಿಕ ತಂತ್ರಜ್ಞಾನ, ಆರ್ಥಿಕತೆಯ ಆಧಾರಸ್ತಂಭವಾಗಿ ರೂಪುಗೊಂಡಿದೆ. ಕರ್ನಾಟಕವು ಏಷ್ಯಾ ಫೆಸಿಫಿಕ್ ವಲಯದಲ್ಲಿ ಅತಿ ಹೆಚ್ಚು ಟೆಕ್ ಪ್ರತಿಭೆಗಳನ್ನು ಹೊಂದಿದ ಉಗಮಸ್ಥಾನವಾಗಿದೆ. ಜಗತ್ತು ಯಾಂತ್ರೀಕರಣದತ್ತ ವೇಗವಾಗಿ ಸಾಗುತ್ತಿರುವ ಈ ಹೊತ್ತಿನಲ್ಲಿ ಉದ್ಯೋಗಾಧಾರಿತ, ಕೌಶಲ್ಯಭರಿತ ಶಿಕ್ಷಣವು ಹೆಚ್ಚಿನ ಮಹತ್ವ ಪಡೆದಿದೆ. ವಿಶ್ವದ ಫಿನ್ಟೆಕ್ ಮಾರುಕಟ್ಟೆಯು 194.1 ಬಿಲಿಯನ್ ಡಾಲರ್ ವಹಿವಾಟು ಹೊಂದಿ, ಶೇ.16.8 ಪ್ರಗತಿ ಸಾಧಿಸುತ್ತಿದೆ. 2024 ರಲ್ಲಿ ವಿಶ್ವದಲ್ಲಿ 30,000 ಫಿನ್ಟೆಕ್ ಸ್ಟಾರ್ಟಪ್ಗಳು, ಭಾರತದಲ್ಲಿ 8000 ಫಿನ್ಟೆಕ್ ಸ್ಟಾರ್ಟಪ್ಗಳು ನೋಂದಣಿಯಾಗಿ, ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ. ಭಾರತದಲ್ಲಿನ ಇಂರ್ಟನೆಟ್, ಹಣಕಾಸು ಕ್ಷೇತ್ರದಲ್ಲಿ ಕ್ರಾಂತಿಯುಂಟು ಮಾಡಿದ್ದು, ಡಿಜಿಟಲ್ ಪಾವತಿ, ಮೊಬೈಲ್ ವ್ಯಾಲೆಟ್, ಬ್ಯಾಂಕ್ ಆಪ್ಗಳ ಬಳಕೆ, ನಿಯೋ ಬ್ಯಾಂಕಿಂಗ್, ವೈಯಕ್ತಿಕ ಹಣಕಾಸು ಮತ್ತಿತರ ಸೇವೆಗಳನ್ನು ಬಳಕೆಗೆ ಅವಕಾಶ ಮಾಡಿಕೊಟ್ಟು ಜನರ ಮೆಚ್ಚುಗೆ ಗಳಿಸಿದೆ ಎಂದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಟಿ.ಎನ್.ನರಸಿಂಹಮೂರ್ತಿ ಮಾತನಾಡಿ, ಉತ್ಪಾದನೆ ಆಧಾರಿತ ಉತ್ತೇಜನ ಯೋಜನೆಗಳಾದ ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮೂಲಕ ಉದ್ಯಮ ವಲಯವು ಹಣಕಾಸು ಹಾಗೂ ಸಂಬಂಧಿತ ಸೇವೆಗಳು, ವಿಮೆ, ಗ್ರಾಹಕ ಸರಕುಗಳು, ಜವಳಿ, ಎಲೆಕ್ಟ್ರಾನಿಕ್ಸ್, ಔಷಧ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದ ಬೆಳವಣಿಗೆ ಸಾಧಿಸಿದೆ. ಯುವಜನರು ಡಿಜಿಟಲೀಕರಣದ ಉಪಯೋಗ ಪಡೆದು ಉದ್ದಿಮೆ ಪ್ರಾರಂಭಿಸಿ ಎಂದರು. ಪ್ರಾಂಶುಪಾಲ ರಾಮಾಂಜನಪ್ಪ ಮಾತನಾಡಿ, ಫಿನ್ಟೆಕ್ ಸೇವೆಗಳು ಜನರ ಆರ್ಥಿಕ ಜೀವನಾಡಿಯಾಗಿ, ವಿಪುಲ ಉದ್ಯೋಗಗಳನ್ನು ಸೃಷ್ಟಿಸಿವೆ. ಹಣಕಾಸು
ಸಂಸ್ಥೆಗಳು ಹಲವು ಸೇವೆಗಳನ್ನು ನೀಡುತ್ತಿದ್ದು, ಆರ್ಥಿಕಾಭಿವೃದ್ಧಿಗೆ ಪೂರಕವಾಗಿದೆ. ಇಲ್ಲಿನ ಉದ್ಯೋಗ ಗಳಿಸಲು ಅಗತ್ಯ ಕೌಶಲ್ಯ,
ಬುದ್ಧಿಮತ್ತೆ ಕರಗತ ಮಾಡಿಕೊಳ್ಳಬೇಕು ಎಂದರು.