ಟೂರ್ನಿಯಿಂದ ಹೊರಬಿದ್ದ 60 ತಂಡಗಳು

1 gkp 07
Published on

ಪೊನ್ನಂಪೇಟೆ: ಕರ್ನಾಟಕ ಪಬ್ಲಿಕ್ ಶಾಲಾ ಟರ್ಫ್ ಮೈದಾನದಲ್ಲಿ ಕೊಡವ ಹಾಕಿ ಅಕಾಡೆಮಿ ವತಿಯಿಂದ ಪಾಂಡಂಡ ಎಂ.ಕುಟ್ಟಪ್ಪ ಜ್ಞಾಪಕಾರ್ಥ ನಡೆಯುತ್ತಿರುವ ಕೊಡವ ಕೌಟುಂಬಿಕ ರಿಂಕ್ ಹಾಕಿ ನಮ್ಮೆಯಲ್ಲಿ ಈವರೆಗೆ 60 ತಂಡಗಳು ಹೊರ ಬಿದ್ದಿದ್ದು, 53 ತಂಡಗಳು ಸ್ಪರ್ಧೆ ಮುಂದುವರಿಸಿವೆ.


ದಿನದಿಂದ ದಿನಕ್ಕೆ ಪಂದ್ಯಾವಳಿ ರೋಚಕತೆ ಪಡೆದುಕೊಳ್ಳುತ್ತಿದ್ದು, ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡುತ್ತಿದೆ. 6 ದಿನಗಳ ಪಂದ್ಯ ನಡೆದಿದ್ದು, ಗುಂಪು 1 ಮತ್ತು 2 ರಲ್ಲಿ ಮೂರು ಸುತ್ತಿನ ಪಂದ್ಯಗಳು ಮುಗಿದಿವೆ. ಉಭಯ ಗುಂಪುಗಳಲ್ಲಿದ್ದ ಒಟ್ಟು 56 ತಂಡಗಳಲ್ಲಿ 48 ತಂಡಗಳು ಟೂರ್ನಿಯಿಂದ ಹೊರ ಬಿದ್ದಿವೆ.
ಪರದಂಡ, ಮಾತಂಡ, ಮಂಡೇಪಂಡ, ಮಚ್ಚಂಡ, ಕುಲ್ಲೇಟೀರ, ಚೆಪ್ಪುಡೀರ, ಪೆಮ್ಮಂಡ, ಚೇಂದಂಡ ತಂಡಗಳು ಕ್ವಾರ್ಟರ್ ಫೈನಲ್ ಕನಸು ಕಾಣುತ್ತಿವೆ. ಟೂರ್ನಿಯಿಂದ ಒಟ್ಟಾರೆ 60 ತಂಡಗಳು ಹೊರ ಬಿದ್ದಿದ್ದು, 53 ತಂಡಗಳು ಸ್ಪರ್ಧೆ ಮುಂದುವರಿಸಿದೆ. ನ.6 ರಂದು ಫೈನಲ್ ಹಣಾಹಣಿ ನಡೆಯಲಿದೆ.


ಕುಪ್ಪಂಡ, ಚೇಂದಂಡಕ್ಕೆ ಜೋಡಿ ಗೆಲುವು
ಮಂಗಳವಾರದ ಪಂದ್ಯಗಳಲ್ಲಿ ಕುಪ್ಪಂಡ (ಕೈಕೇರಿ) ಹಾಗೂ ಚೇಂದಂಡ ತಂಡಗಳು ಜೋಡಿ ಗೆಲುವಿನ ಸಿಹಿಯೊಂದಿಗೆ ಪ್ರೀ ಕ್ವಾರ್ಟರ್‌ಗೆ ಪ್ರವೇಶ ಪಡದವು.
ಕುಪ್ಪಂಡವು (ಕೈಕೇರಿ) ಮೊದಲ ಪಂದ್ಯದಲ್ಲಿ ಬೊಟ್ಟೋಳಂಡವನ್ನು 4-0 ಗೋಲುಗಳಿಂದ ಮಣಿಸಿತು. ಕುಪ್ಪಂಡ ಚೆಂಗಪ್ಪ 2, ಕೆನಿತ್, ನಾಚಪ್ಪ ತಲಾ 1 ಗೋಲು ಹೊಡೆದರು. ಬಾರಿಯಂಡ ವಿರುದ್ಧ 5-2 ಗೋಲುಗಳಿಂದ ಗೆಲುವಿನ ಅಭಿಯಾನ ಮುಂದುವರಿಸಿದ ತಂಡದ ಪರ ಕುಪ್ಪಂಡ ನಾಚಪ್ಪ 4, ಜಗತ್ 1 ಗೋಲುಗಳ ಕಾಣಿಕೆ ನೀಡಿದರು. ಬಾರಿಯಂಡ ಬೆಳ್ಯಪ್ಪ 2 ಗೋಲು ಸಿಡಿಸಿದರು.


ಚೇಂದಂಡವು ಮೊದಲ ಪಂದ್ಯದಲ್ಲಿ ಪಾಲಂದೀರವನ್ನು 9-4 ಗೋಲುಗಳಿಂದ ಸೋಲಿಸಿತು. ಚೇಂದಂಡ ಉತ್ತಪ್ಪ 5, ಬೋಪಣ್ಣ 2, ಸೋನು, ಶಮ್ಮಿ ತಲಾ 1, ಪಾಲಂದೀರ ಉತ್ತಪ್ಪ 3, ಮುತ್ತಣ್ಣ 1 ಗೋಲು ಹೊಡೆದರು. ಮತ್ತೊಂದು ಪಂದ್ಯದಲ್ಲಿ ನೆರವಂಡ ವಿರುದ್ದ 9-3 ಗೋಲುಗಳ ಜಯಿಸಿತು. ಚೇಂದಂಡ ಉತ್ತಪ್ಪ 3, ಸೋನು, ಬೋಪಣ್ಣ, ಅಮೋಘ್, ನೆರವಂಡ ನಾಚಪ್ಪ ತಲಾ 2, ಪ್ರವೀಣ್ 1 ಗೋಲು ಹೊಡೆದರು.


ಫಲಿತಾಂಶ ವಿವರ
ಬಾರಿಯಂಡಕ್ಕೆ ಕಳ್ಳಂಗಡ ವಿರುದ್ಧ 4-2 ಗೋಲುಗಳ ಜಯ ದೊರೆಯಿತು. ಬಾರಿಯಂಡ ಬೆಳ್ಯಪ್ಪ 3, ಭೀಮಯ್ಯ, ಕಳ್ಳಂಗಡ ಚೆಂಗಪ್ಪ, ಮಂದಣ್ಣ ತಲಾ ಒಂದೊಂದು ಗೋಲು ದಾಖಲಿಸಿದರು.
ನೆರವಂಡಕ್ಕೆ ಪಾಲಚಂಡ ವಿರುದ್ಧ 8-5 ಗೋಲುಗಳ ಜಯ ಲಭಿಸಿತು. ನೆರವಂಡ ದರ್ಶನ್ 3, ನಾಚಪ್ಪ, ದೇವಯ್ಯ ತಲಾ 2, ಪ್ರವೀಣ್ 1, ಪಾಲಚಂಡ ಬೋಪಣ್ಣ 5 ಗೋಲು ಹೊಡೆದು ಸೋಲಿನ ಅಂತರ ತಗ್ಗಿಸಿದರು.


ಕಾಳೇಂಗಡಕ್ಕೆ ಕುಮ್ಮಂಡ ವಿರುದ್ಧ 7-5 ಗೋಲುಗಳ ಜಯ ದೊರೆಯಿತು. ಕಾಲೇಂಗಡ ಬೋಪಣ್ಣ 4, ಬಿದ್ಪಪ್ಪ, ಸುಹಾನ್, ಭವನ್ ತಲಾ 1, ಕುಮ್ಮಂಡ ನಾಣಯ್ಯ 4, ಗಣಪತಿ 1 ಗೋಲು ಬಾರಿಸಿ ತೀವೃ ಪ್ರತಿಸ್ಪರ್ಧೆ ನೀಡಿದರು.
ಚೆಕ್ಕೇರವು ಅಪ್ಪಚೆಟ್ಟೋಳಂಡವನ್ನು 8-3 ಗೋಲುಗಳಿಂದ ಮಣಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆದುಕೊಂಡಿತು. ಚೆಕ್ಕೇರ ಆದರ್ಶ್ 4, ಬಿಸ್ನಲ್ 2, ಸಿದ್ದಾಂತ್, ಬೋಪಣ್ಣ ತಲಾ 1, ಅಪ್ಪಚೆಟ್ಟೋಳಂಡ ಅಯ್ಯಪ್ಪ 2, ಯಾನ್ 1 ಗೋಲು ಹೊಡೆದರು.


ಮುಕ್ಕಾಟೀರ (ಕಡಗದಾಳ್) ತಂಡಕ್ಕೆ ಮುಲ್ಲೇಂಗಡ ವಿರುದ್ಧ 12-1 ಗೋಲುಗಳ ಭರ್ಜರಿ ಗೆಲುವು ದೊರೆಯಿತು. ಮುಕ್ಕಾಟೀರ ನಾಣಯ್ಯ 5, ಕಾವ್ಯ 3, ಅಶ್ವಿನ್ 2, ರಿಶ್ವಿನ್, ಕುಟ್ಟಯ್ಯ, ಮುಲ್ಲೇಂಗಡ ಉತ್ತಪ್ಪ ತಲಾ ಒಂದೊಂದು ಗೋಲು ಬಾರಿಸಿದರು.
ಐಚೇಟ್ಟಿರವು ತೀತಿಮಾಡವನ್ನು 3-1 ಗೋಲುಗಳಿಂದ ಮಣಿಸಿತು. ಐಚೇಟ್ಟಿರ ಲೆಹರ್, ರೋಶನ್ ತಲಾ 2, ತೀತಿಮಾಡ ಉತ್ತಪ್ಪ 1 ಗೋಲು ಬಾರಿಸಿದರು.
ಮುರುವಂಡ ಕೊಂಗೇಟಿರವನ್ನು 4-2 ಗೋಲುಗಳಿಂದ ಸೋಲಿಸಿತು. ಮುರುವಂಡ ಪೊನ್ನಪ್ಪ 2, ಕಾರ್ಯಪ್ಪ, ಅಪ್ಪಣ್ಣ ತಲಾ 1, ಕೊಂಗೇಟಿರ ಪೆಮ್ಮಯ್ಯ 2 ಗೋಲು ದಾಖಲಿಸಿದರು.


ಚೇನಂಡವು ಪಾಲೆಯಡ ವಿರುದ್ಧ 5-2 ಗೋಲುಗಳಿಂದ ಗೆದ್ದು ಬೀಗಿತು. ಚೇನಂಡ ಮೌರ್ಯ 3, ಹರ್ಷಾ, ಚಮನ್, ಪಾಲೆಯಡ ಮೊಣ್ಣಪ್ಪ, ಕರುಂಬಯ್ಯ ತಲಾ ಒಂದೊಂದು ಗೋಲು ದಾಖಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net