ಟೀಕೆಗಳಿಗೆ ಆದ್ಯತೆ ನೀಡಬೇಕಿಲ್ಲ; ಯಥಾವತ್ತಾಗಿ ಧರ್ಮ ಪಾಲಿಸಿ: ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಆಶೀರ್ವಚನ

TTH WEB
Published on

ತೀರ್ಥಹಳ್ಳಿ: ಸಮಾಜದಲ್ಲಿ ಹಿಂದು ಧರ್ಮದ ಬಗ್ಗೆ ಕೆಲವರು ಮಾಡುವ ಟೀಕೆಗಳಿಗೆ ಆದ್ಯತೆ ನೀಡಬೇಕಿಲ್ಲ. ಈ ಧರ್ಮದ ಪರಂಪರೆಯನ್ನು ಮೆರೆದ ಋಷಿ ಮುನಿಗಳ ಮಾರ್ಗದರ್ಶನದಂತೆ ಸಂಪ್ರದಾಯವನ್ನು ಬಿಡದೆ ಯಥಾವತ್ತಾಗಿ ಧರ್ಮವನ್ನು ಪಾಲಿಸುವುದು ಹಿಂದುಗಳಾದವರ ಆದ್ಯ ಕರ್ತವ್ಯವಾಗಿದೆ ಎಂದು ಶೃಂಗೇರಿಯ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ರಾಮೇಶ್ವರ ದೇವಸ್ಥಾನದ ಆವರಣದಲ್ಲಿರುವ ಶ್ರೀ ಮಾಧವ ದೇವಸ್ಥಾನದಲ್ಲಿ ಸೋಮವಾರ ಮಹಾರುದ್ರಯಾಗದಲ್ಲಿ ಪಾಲ್ಗೊಂಡು ಕುಂಭಾಭಿಷೇಕ ಹಾಗೂ ನವೀಕೃತ ಚಂದ್ರಶಾಲೆಯನ್ನು ಲೋಕಾರ್ಪಣಗೊಳಿಸಿ ನಂತರ ತೇರು ಕೊಟ್ಟಿಗೆ ಆವರಣದಲ್ಲಿ ಆಶೀರ್ವಚನ ನೀಡಿದರು.

ತಾವು ವಿದ್ಯಾವಂತರು ಬುದ್ಧಿವಂತರೆನಿಸಿಕೊಂಡವರು ಹಿಂದು ಧರ್ಮವನ್ನು ಟೀಕಿಸಿ ಹೀಗೆಳೆಯುವ ಮೂಲಕ ತಪ್ಪು ಭಾವನೆಯನ್ನು ಕೆರಳಿಸುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಬೇರೆ ಧರ್ಮಗಳಲ್ಲೂ ಸಾಕಷ್ಟು ಗೊಂದಲಗಳಿದ್ದರೂ ಆ ಬಗ್ಗೆ ಚಕಾರ ವೆತ್ತದೇ ಕೇವಲ ಹಿಂದು ಧರ್ಮದ ಬಗ್ಗೆ ನಿಂದನೆ ಹಾಗೂ ಅಪಪ್ರಚಾರ ಮಾಡುವುದಕ್ಕೆ ಅವರ ಪಾಂಡಿತ್ಯ ಮೀಸಲಾಗಿರುವುದನ್ನು ಕಾಣುತ್ತಿದ್ದೇವೆ. ಹಿಂದುಗಳಾದವರು ಈ ಬಗ್ಗೆ ಚಿಂತನೆಗೆ ಅವಕಾಶ ನೀಡದೆ ಸಂಪ್ರದಾಯವನ್ನೂ ಪಾಲಿಸುವ ಮೂಲಕ ನಮ್ಮ ಪರಂಪರೆಯನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.

ದೇವರಲ್ಲಿ ದೊಡ್ಡವರು, ಸಣ್ಣವರು ಎಂಬ ಬಗ್ಗೆ ಪರಸ್ಪರ ಜಗಳ, ಭಿನ್ನಾಭಿಪ್ರಾಯಗಳನ್ನು ಕಾಣುತ್ತೇವೆ. ಆದರೆ ದುಷ್ಟರನ್ನು ಸಂಹಾರ ಮಾಡಿ ಲೋಕದಲ್ಲಿ ಶಾಂತಿಯನ್ನು ಸ್ಥಾಪಿಸುವ ಸಲುವಾಗಿ ಬೇರೆ ಬೇರೆ ಅವತಾರಗಳಲ್ಲಿ ಕಾಣಿಸಿಕೊಳ್ಳುವ ಭಗವಂತನಲ್ಲಿ ಭೇದವನ್ನು ಹುಡುಕುವ ಮನೋಭಾವ ಸರಿಯಲ್ಲ್ಲ. ದೇವರಲ್ಲಿ ದೊಡ್ಡವರು, ಸಣ್ಣವರು ಎಂಬುದು ನಮ್ಮ ಅಜ್ಞಾನವಾಗಿದೆ. ನಾವು ಮಾಡುವ ಪೂಜೆಯ ಬಗ್ಗೆ ನಿಷ್ಠೆ ಮತ್ತು ಭಕ್ತಿ ಅಗತ್ಯ ಎಂದು ಹೇಳಿದರು.

21 ಬಾರಿ ಭೂ ಪ್ರದಕ್ಷಿಣೆ ಮಾಡಿ ದುಷ್ಟರನ್ನು ಸಂಹರಿಸಿದ ಪರಶುರಾಮ ಕ್ಷೇತ್ರವಾದ ಈ ಪುಣ್ಯ ನೆಲ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. ರಾಮೇಶ್ವರದಲ್ಲಿ ಜ್ಯೋತಿರ್ಲಿಂಗವನ್ನು ಶ್ರೀರಾಮ ಸ್ಥಾಪನೆ ಮಾಡಿದಂತೆ ಈ ಪುಣ್ಯ ಕ್ಷೇತ್ರದಲ್ಲಿ ಪರಶುರಾಮನಿಂದ ಸ್ಥಾಪನೆಗೊಂಡಿರುವ ರಾಮೇಶ್ವರನಲ್ಲಿ ರಾಮನೂ ಲೀನನಾಗಿದ್ದಾನೆ. ಇಲ್ಲಿ ನಡೆಯುವ ರಥೋತ್ಸವ ಕಾರ್ಯದಲ್ಲಿ ನಮ್ಮ ಮಠದ ವಿದ್ವಾಂಸರು ಬಂದು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ಅನಾದಿ ಕಾಲದಿಂದ ನಡೆದು ಬಂದ ಪದ್ಧತಿಯಾಗಿದೆ. ಹೀಗಾಗಿ ಇದು ನಮಗೆ ಅತ್ಯಂತ ಪ್ರಿಯವಾದ ಕ್ಷೇತ್ರವಾಗಿದೆ. ಮಾಧವ ದೇವಸ್ಥಾನದ ಅರ್ಚಕ ಲಕ್ಷ್ಮೀಶ ತಂತ್ರಿಗಳ ಧಾರ್ಮಿಕ ಕಾರ್ಯದ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ವೆಂಕಟೇಶ ಪಟವರ್ಧನ್, ಪಪಂ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ, ಕೆರೋಡಿ ಮೋಹನ್ ಇತರರ್ದ್ದಿರು. ಕುಂಭಾಭಿಷೇಕಕ್ಕೆ ಮುನ್ನ ಮಾಧವ ದೇವಸ್ಥಾನದಲ್ಲಿ ನಡೆದ ಪೂಜಾ ಕಾರ್ಯದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪಾಲ್ಗೊಂಡಿದ್ದರು. ಶ್ರೀಗಳು ಮಂತ್ರಾಕ್ಷತೆಯೊಂದಿಗೆ ನೀಡಿದ ಕಮಲದ ಹೂವನ್ನು ನೋಡಿ ನಮಗೆ ಬೇಕಾದುದನ್ನೇ ನೀಡಿದ್ದೀರಿ ಎಂದು ಆರಗ ಜ್ಞಾನೇಂದ್ರ ಹೇಳಿದರು. ಶ್ರೀಗಳ ಸಮ್ಮುಖದಲ್ಲಿ ಸಂಜೆ ಕಲ್ಲಾರೆ ಗಣಪತಿ ದೇವರಿಗೆ ದೀಪೋತ್ಸವ ಹಗೂ ತುಂಗಾನದಿಯಲ್ಲಿ ತೆಪ್ಪೋತ್ಸವ ಮತ್ತು ತುಂಗಾರತಿ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net