ಟೀಕೆ ಬದಿಗೊತ್ತಿ ಸಾಗಿದರೆ ಯಶಸ್ಸು

19-RNR-05
Published on

ರಾಣೆಬೆನ್ನೂರ: ತನ್ನ ತಾಯಿಗೆ ಆರೋಗ್ಯ ಸಮಸ್ಯೆಯಾದ ಸಮಯದಲ್ಲಿ ಆಂಬುಲೆನ್ಸ್ ಇಲ್ಲದೆ ಪರದಾಡಿದ ಸಂತೋಷ ಭಟ್ ಈಗ ಇತರರಿಗೆ ಆ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಉಚಿತವಾಗಿ ಆಂಬುಲೆನ್ಸ್ ಸೇವೆ ಆರಂಭಿಸಿರುವುದು ಶ್ಲಾಘನೀಯ ಎಂದು ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ತಾಲೂಕಿನ ದೇವರಗುಡ್ಡ ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಪೂಜಾರ ಹಾಗೂ ತಂಡದವರು ಗ್ರಾಮಸ್ಥರ ಉಪಯೋಗಕ್ಕಾಗಿ ಉಚಿತವಾಗಿ ನೀಡಿದ ಆಂಬುಲೆನ್ಸ್​ಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಒಳ್ಳೆಯ ಕೆಲಸ ಮಾಡುವವರಿಗೆ ಟೀಕೆಗಳು ಬಹಳ. ಆದರೆ, ಅಂತಹ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಟೀಕೆ ಮಾಡುವವರು ಮಾಡುತ್ತಲೇ ಇರುತ್ತಾರೆ. ಅವುಗಳನ್ನು ಕಿವಿಯೊಳಗೆ ಹಾಕಿಕೊಳ್ಳದೆ ಮುಂದೆ ಸಾಗಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.

ಅರ್ಚಕ ಸಂತೋಷ ಭಟ್ ಪೂಜಾರ ಮಾತನಾಡಿ, ನನ್ನ ತಾಯಿಗೆ ಹೃದಯಾಘಾತವಾದ ಸಮಯದಲ್ಲಿ ವೆಂಟಿಲೇಟರ್ ವ್ಯವಸ್ಥೆವುಳ್ಳ ಆಂಬುಲೆನ್ಸ್ ದೊರೆತಿದ್ದರೆ, ಅವರು ಬದುಕುತ್ತಿದ್ದರು. ಆಗ ನಾನು ಅನುಭವಿಸಿದ ನೋವು ದೇವರಗುಡ್ಡ ಸೇರಿ ಸುತ್ತಲಿನ ಜನರಿಗೆ ಆಗಬಾರದು ಎಂಬ ಉದ್ದೇಶದಿಂದ ಆಂಬುಲೆನ್ಸ್ ಸೇವೆ ಆರಂಭಿಸಿದ್ದೇವೆ. ಗ್ರಾಮಸ್ಥರು ವಾಹನದ ಸದುಪಯೋಗ ಪಡೆದುಕೊಳ್ಳಲಿ ಎಂದರು.

ಶಾಸಕ ಅರುಣಕುಮಾರ ಪೂಜಾರ, ಪ್ರಮುಖರಾದ ಚಂದ್ರಶೇಖರ ಪೂಜಾರ, ಚೋಳಪ್ಪ ಕಸವಾಳ, ಮಂಜುನಾಥ ಓಲೇಕಾರ, ಮಲ್ಲಪ್ಪಯ್ಯ ಒಡೆಯರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net