ಟೀಕೆ, ದೂಷಣೆಯಿಂದ ಯಾವ ಪ್ರಯೋಜನವಿಲ್ಲ

Arasu
Published on

ಚಿತ್ರದುರ್ಗ: ಮತ್ತೊಬ್ಬರ ವಿರುದ್ಧ ಟೀಕೆ ಮಾಡುವುದರಿಂದ, ಹಗುರವಾಗಿ ಮಾತನಾಡಿ ದೂಷಿಸುವುದರಿಂದ ಪ್ರಯೋಜನವಿಲ್ಲ. ವಿದ್ಯೆ ಧಾರೆ ಎರೆಯುವ ಮೂಲಕ ಬೇರೆಯವರನ್ನು ಬೆಳೆಸುವುದರಲ್ಲೇ ಹೆಚ್ಚು ತೃಪ್ತಿ ಇದೆ ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಿಇಒ ಎಂ.ಸಿ. ರಘುಚಂದನ್ ಸಲಹೆ ನೀಡಿದರು.

ಸಂಸ್ಥೆಯ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಡಾ. ಅನಂತರಾಮು, ಎಂ.ಎಂ. ಪ್ರೌಢಶಾಲೆ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಪಾಪಣ್ಣ ಅವರಿಗೆ ಸೋಮವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಸಂಸ್ಥೆ ಹೆಮ್ಮರವಾಗಿ ಬೆಳೆಯಲು ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ ಕಾರಣ. ದೇಹಕ್ಕೆ ವಯಸ್ಸಾಗಬಹುದು. ಆದರೆ, ಮನಸ್ಸಿಗಲ್ಲ. ಗುಣ, ಸ್ವಭಾವ, ಒಳ್ಳೆತನ ನೋಡಿ ವ್ಯಕ್ತಿತ್ವ ಅಳೆಯಬೇಕೆ ಹೊರತು ರೂಪ, ಧರಿಸುವ ಬಟ್ಟೆಯಿಂದಲ್ಲ. ಕೆಟ್ಟ ಆಲೋಚನೆ ಬದಿಗಿಟ್ಟು, ಸಧೃಢ ಆರೋಗ್ಯ ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ದಾವಣಗೆರೆ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಎಚ್.ವಿ. ವಾಮದೇವಪ್ಪ ಮಾತನಾಡಿ, ಬ್ರಿಟಿಷರಿಗೆ ಇಂಗ್ಲಿಷ್ ವ್ಯಾಕರಣ ಕಲಿಸಿದ್ದು, ಭಾರತೀಯ ಶಿಕ್ಷಕರು. ಅಂತಹ ಪಾಂಡಿತ್ಯ ನಮ್ಮವರಲ್ಲಿದೆ. ಪ್ರಾಚೀನ ಕಾಲದಿಂದಲೂ ಗುರು-ಶಿಷ್ಯರ ಬಾಂಧವ್ಯ ಅನ್ಯೋನ್ಯವಾಗಿದ್ದು, ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರಿಗಿದೆ ಎಂದರು.

ದಾವಣಗೆರೆ ವಿವಿ ಶಿಕ್ಷಣ ನಿಕಾಯ ಮುಖ್ಯಸ್ಥ ಡಾ.ಕೆ. ವೆಂಕಟೇಶ್, ಕೆ. ರುದ್ರಮುನಿ, ಗೋವಿಂದರಾಜು, ನಾಗಭೂಷಣ್ ಶೆಟ್ಟಿ, ಸಂಸ್ಥೆಯ ಎಲ್ಲ ಪ್ರಾಚಾರ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net