ಟಿಬೆಟಿಯನ್ ಸಮುದಾಯದಿಂದ ಪ್ರತಿಭಟನೆ

20
Published on

ಮೈಸೂರು: ಚೀನಾ ದಬ್ಬಾಳಿಕೆ ಖಂಡಿಸಿ ಟಿಬೆಟಿಯನ್ ಸಮುದಾಯದವರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.+


ಚೀನಾ 1959ರ ಮಾರ್ಚ್10ರಂದು ಲಕ್ಷಾಂತರ ಟಿಬೆಟಿಯನ್ನರನ್ನು ಕೊಂದ ದಿನವನ್ನು ಟಿಬೆಟಿಯನ್ನರು ರಾಷ್ಟ್ರೀಯ ಬಂಡಾಯ ದಿನವಾಗಿ ಆಚರಿಸುತ್ತಿದ್ದಾರೆ. ಇದರ ಭಾಗವಾಗಿ ಟಿಬೆಟ್ ಯುವ ಕಾಂಗ್ರೆಸ್, ಪ್ರಾಂತೀಯ ಟಿಬೆಟನ್ ಮಹಿಳಾ ಸಂಘಟನೆ, ಬೈಲಕುಪ್ಪೆ, ಹುಣಸೂರು, ಕೊಳ್ಳೇಗಾಲ ಮತ್ತು ಮೈಸೂರು ಟಿಬೆಟನ್ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡರು.


ಟಿಬಿಟಿಯನ್ನರು ಚೀನಾದ ಆಳ್ವಿಕೆಯಲ್ಲಿ ಊಹಿಸಲಾಗದ ನೋವು ಎದುರಿಸುತ್ತಿದ್ದಾರೆ. ಚೀನೀಯರ ದಬ್ಬಾಳಿಕೆ, ಚಿತ್ರಹಿಂಸೆ, ಮಾನಸಿಕ ಕಿರುಕುಳಗಳಿಂದಾಗಿ 1.2 ಮಿಲಿಯನ್ ಟಿಬೆಟಿಯನ್ನರು ಪ್ರಾಣ ತ್ಯಾಗ ಮಾಡಿದ್ದಾರೆ. ಟಿಬೆಟಿಯನ್ ಭಾಷೆ, ಸಂಸ್ಕೃತಿ, ಧರ್ಮ ಮತ್ತು ಗುರುತನ್ನು ಚೀನಾ ವ್ಯವಸ್ಥಿತವಾಗಿ ನಾಶಪಡಿಸುತ್ತಿದೆ ಎಂದು ಕಿಡಿಕಾರಿದರು


ಟಿಬೆಟಿಯನ್ ಮಕ್ಕಳು ಟಿಬೆಟ್ ಭಾಷೆ ಕಲಿಯುವುದನ್ನು ನಿಷೇಧಿಸಲಾಗಿದೆ. ಚೀನಾದ ಅನುಮತಿಯಿಲ್ಲದೆ ಮಠಗಳು ಶಿಷ್ಯರನ್ನು ಸೇರಿಸಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ದಲೈಲಾಮಾ ಅವರು ಟಿಬೆಟ್ ಸಮಸ್ಯೆಗೆ ತೋರಿದ ಅತ್ಯಂತ ಸಮಂಜಸವಾದ ಮಧ್ಯ ಮಾರ್ಗ ಪರಿಹಾರವನ್ನು ಚೀನಾ ಸರ್ಕಾರ ಒಪ್ಪಿಕೊಳ್ಳಬೇಕು. ಕೇಂದ್ರೀಯ ಟಿಬೆಟಿಯನ್ ಆಡಳಿತದೊಂದಿಗೆ ಮಾತುಕತೆಗೆ ಮುಂದಾಗಬೇಕು. ಪಂಚೆನ್ ಲಾಮಾ ಹಾಗೂ ಇತರ ರಾಜಕೀಯ ಕೈದಿಗಳನ್ನು ಬಿಡಗಡೆ ಮಾಡಬೇಕು. ಟಿಬೆಟಿಯನ್ನರ ಧಾರ್ಮಿಕ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಭಾಷಾ ಭಾವನೆಯನ್ನು ಗೌರವಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ನೂರಾರು ಮಂದಿ ಟಿಬೆಟಿಯನ್ನರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net