

ಮೈಸೂರು; ಟಿಪ್ಪು ಸುಲ್ತಾನ್ ಹೆಸರಿಗೆ ಕಪ್ಪು ಮಸಿ ಬಳಿಯುವ ಹುನ್ನಾರ ನಡೆದಿದೆ ಎಂದು ಇಸ್ಲಾಂ ಧರ್ಮಗುರು ಸರ್ಖಾಜಿ ಹಜರತ್ ಮೌಲಾನಾ ಮೊಹಮ್ಮದ್ ಉಸ್ಮಾನ್ ಷರೀಫ್ ಅಸಮಾಧಾನ ವ್ಯಕ್ತಪಡಿಸಿದರು.
ಹಜ್ರತ್ ಟಿಪ್ಪು ಸುಲ್ತಾನ್ ಷಹೀದ್ ಸಂಸ್ಥೆ ವತಿಯಿಂದ ಅಶೋಕ ರಸ್ತೆಯ ಮಿಲಾದ್ ಪಾರ್ಕ್‌ನಲ್ಲಿ ಭಾನುವಾರ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಅವರ 231ನೇ ವಾರ್ಷಿಕ ಗಂಧದ ಉರುಸ್ ಷರೀಫ್ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಟಿಪ್ಪು ಇತಿಹಾಸ ತಿಳಿಯದೆ ಅವರ ಕುರಿತು ಕೆಲ ದೇಶದ್ರೋಹಿಗಳು ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ಬ್ರಿಟಿಷರ ವಿರುದ್ಧ ಹೋರಾಡಿದ ವೀರಯೋಧ ಟಿಪ್ಪು. ಇಂಗ್ಲಿಷ್‌ರೊಂದಿಗೆ ಶಾಮೀಲಾಗಿ ಅವರ ಗುಲಾಮರಾಗಿ ಬಹಳಷ್ಟು ರಾಜರು ಬಾಳಿದ್ದರು. ಆದರೆ ಟಿಪ್ಪು ಮಾತ್ರ ‘ಗುಲಾಮರಾಗಿ ನೂರು ವರ್ಷ ಬಾಳುವುದಲ್ಲ. ಒಂದು ದಿನ ಅರಸನಾಗಿ ಬಾಳಬೇಕು’ ಎಂದು ಪ್ರತಿಪಾದಿಸಿದ್ದರು. ಒಂದು ವೇಳೆ, ಬ್ರಿಟಿಷರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಅವರು ನೂರು ವರ್ಷ ಅರಸನಾಗಿ ಬದುಕಬಹುದಿತ್ತು. ಅದಕ್ಕೆ ಅವರು ಒಪ್ಪಲಿಲ್ಲ ಎಂದು ಸ್ಮರಿಸಿದರು.
ಇದೇ ವೇಳೆ ಶಾಸಕ ತನ್ವೀರ್ ಸೇಠ್ ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ನಗರದ ಬಸವಧ್ಯಾನ ಕೇಂದ್ರದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಚಾತುವರ್ಣ ಪದ್ಧತಿ ಬಳಸಿಕೊಂಡು ದಲಿತರು, ಹಿಂದುಳಿದ ವರ್ಗದವರನ್ನು ಶೋಷಣೆ ಮಾಡಿಕೊಂಡು ಬರಲಾಗುತ್ತಿದೆ. ಕೆಲವರಿಗೆ ನೂರಾರು ಎಕರೆ ಭೂಮಿ ಇದೆ. ಕೆಲವರಿಗೆ ಭೂಮಿ ಇನ್ನೂ ದೊರೆತಿಲ್ಲ. ಆದರೆ ಆ ಕಾಲದಲ್ಲಿ ಟಿಪ್ಪು ಸುಲ್ತಾನ್ ದಲಿತರು, ಹಿಂದುಳಿದ ವರ್ಗದವರಿಗೆ ಭೂಮಿಯನ್ನು ಹಂಚಿಕೆ ಮಾಡಿ ಅವರ ಜೀವನ ಮಟ್ಟ ಸುಧಾರಣೆಗೆ ಶ್ರಮಿಸಿದ್ದರು ಎಂದು ಸ್ಮರಿಸಿದರು.
ಟಿಪ್ಪು ತನ್ನ ಆಡಳಿತ ಅವಧಿಯಲ್ಲಿ ಜೀತ ಪದ್ಧತಿ ನಿರ್ಮೂಲನೆ ಮಾಡಿ ಕೆಳಸ್ತರದ ಜನರೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಸಮನಾಗಿ ಬಾಳಲು ಅನೇಕ ಅವಕಾಶ, ಅನುಕೂಲ ಕಲ್ಪಿಸಿಕೊಟ್ಟಿದ್ದರು ಎಂದರು.
ಟಿಪ್ಪು ಚರಿತ್ರೆಯನ್ನು ಬಿಟ್ಟರೆ ಮೈಸೂರು ಮತ್ತು ಕರ್ನಾಟಕ ರಾಜ್ಯದ ಇತಿಹಾಸ ಪೂರ್ಣವಾಗಲ್ಲ. ಅದು ಅಪೂರ್ಣವಾಗುತ್ತದೆ. ಟಿಪ್ಪು ಹೆಸರನ್ನು ಮಕ್ಕಳಿಗೆ ಇಡಬೇಕು. ಅವರನ್ನು ಮರೆತರೆ ನಾವು ನಮ್ಮನ್ನು ಮರೆತಂತಾಗಲಿದೆ ಎಂದು ಹೇಳಿದರು.
ಟಿಪ್ಪು ಅವರು ಅನ್ಯ ಧರ್ಮಗಳ ಕುರಿತು ಸಹಿಷ್ಣುತೆ ಮೈಗೂಡಿಸಿಕೊಂಡಿದ್ದರು. ಈ ಕಾರಣದಿಂದಲೇ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ, ಶೃಂಗೇರಿಯ ಶಾರದಾಂಬೆ ದೇವಸ್ಥಾನಕ್ಕೆ ಭೂಮಿ ನೀಡಿ ಅನೇಕ ಸಹಾಯ ಮಾಡಿದ್ದರು. ಆದರೆ, ಕೆಲವೇ ಜನರು ಟಿಪ್ಪು ಇತಿಹಾಸವನ್ನು ತಿಳಿಯದೆ ಟೀಕೆ ಮಾಡುತ್ತಾರೆ ಎಂದು ಕಿಡಿಕಾರಿದರು.
ಟಿಪ್ಪು ಜನರ ಅನುಕೂಲಕ್ಕಾಗಿ ಅನೇಕ ಕೆರೆಕಟ್ಟೆ, ಬಡವರಿಗೆ ಸೂರು ಕಟ್ಟಿಸಿಕೊಟ್ಟಿದ್ದರು. ಸಕಲೇಶಪುರದಲ್ಲಿ ಕೋಟೆ ನಿರ್ಮಿಸಿದ್ದರು. ಹೀಗಾಗಿ, ಟಿಪ್ಪು ವಿರೋಧಿಗಳು ಮೊದಲು ಅವರ ಸಾಧನೆಯನ್ನು ತಿಳಿದುಕೊಳ್ಳಬೇಕು ಎಂದರು.
ಅನೇಕ ಅಭಿವೃದ್ಧಿ ಕೆಲಸ ಮಾಡಿರುವ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡದಿರುವುದು ಬೇಸರ ತರಿಸಿದೆ ಎಂದರು. ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಮುಖರ‌್ರಮ್, ಕಾರ್ಯದರ್ಶಿ ಅಫ್ರೋಜ್ ಪಾಷ್ ಇನ್ನಿತರರಿದ್ದರು.