‘ಟಿಪ್ಪು ನಿಜ ಕನಸುಗಳು’ ನಾಟಕ ರಂಗಪ್ರಯೋಗಕ್ಕೆ ಸಿದ್ಧ

8
Published on

ಮೈಸೂರು: ಟಿಪ್ಪು ಸುಲ್ತಾನ್ ಕುರಿತು ಅನೇಕ ಸತ್ಯಗಳನ್ನು ಹೊರಚೆಲ್ಲುವ ಸಲುವಾಗಿ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ರಚಿಸಿ, ನಿರ್ದೇಶಿಸಿರುವ ‘ಟಿಪ್ಪು ನಿಜ ಕನಸುಗಳು’ ನಾಟಕ ರಂಗಪ್ರಯೋಗಕ್ಕೆ ಸಿದ್ಧಗೊಂಡಿದೆ.


‘ಈ ನಾಟಕಕ್ಕೆ ರಂಗವಿನ್ಯಾಸಕ ಶಶಿಧರ ಅಡಪ, ವಸ್ತ್ರಪರಿಕರ ವಿನ್ಯಾಸಕಾರ ಪ್ರಮೋದ್ ಶಿಗ್ಗಾಂವ್ ಕೈಜೋಡಿಸಿದ್ದಾರೆ. ಸುಬ್ರಹ್ಮಣ್ಯ, ಧನಂಜಯ್ ಸಂಗೀತ ಸಂಯೋಜಿಸಿದ್ದು, ಮಹೇಶ್ ಕಲ್ಲತ್ತಿ ಬೆಳಕಿನ ವಿನ್ಯಾಸ ನೀಡಿದ್ದಾರೆ. ನಾಟಕಕ್ಕೆ ಕೆಲ ಹಾಡುಗಳನ್ನು ಎಸ್.ರಾಮನಾಥ್ ಬರೆದಿದ್ದಾರೆ. 3 ಗಂಟೆ 20 ನಿಮಿಷದ ಈ ನಾಟಕದ ಮಧ್ಯೆ 10 ನಿಮಿಷಗಳ ವಿರಾಮ ಇದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ರಂಗಾಯಣ ಪ್ರಸ್ತುತಪಡಿಸಿರುವ ಈ ನಾಟಕದಲ್ಲಿ ರೆಪರ್ಟರಿಯ 15 ಕಲಾವಿದರೊಂದಿಗೆ 10 ಅತಿಥಿ ಕಲಾವಿದರು ನಟಿಸಿದ್ದಾರೆ. ಸಂಗೀತ ಮತ್ತು ರಂಗ ಹಿನ್ನೆಲೆ ಸೇರಿದಂತೆ 30 ಕಲಾವಿದರ ತಂಡವು ರಾಜ್ಯಾದ್ಯಂತ ಸಂಚಾರ ಮಾಡಿ 100 ಪ್ರದರ್ಶನ ನೀಡಲಿದೆ. ನ.20ರಂದು ಸಂಜೆ 6ಕ್ಕೆ ಈ ನಾಟಕದ ಪ್ರಥಮ ಪ್ರದರ್ಶನ ರಂಗಾಯಣದ ಭೂಮಿಗೀತದಲ್ಲಿ ನಡೆಯಲಿದೆ. ನಂತರ 21, 24, 26, 27, 30, ಡಿಸೆಂಬರ್4ರಂದು ಇದು ಪ್ರದರ್ಶನವಾಗಲಿದೆ ಎಂದು ಮಾಹಿತಿ ನೀಡಿದರು.


ಟಿಪ್ಪು ನಿಜ ಕನಸುಗಳು ನಾಟಕ ಕೃತಿಯನ್ನು ಬೆಂಗಳೂರಿನ ಅಯೋಧ್ಯಾ ಪ್ರಕಾಶನ ಪ್ರಕಟಿಸಿದೆ. ನ.13ರಂದು ಸಂಜೆ 4ಕ್ಕೆ ರಂಗಾಯಣದ ವನರಂಗದಲ್ಲಿ ಈ ನಾಟಕ ಕೃತಿ ಬಿಡುಗಡೆಯಾಗಲಿದೆ. ಕೃತಿಗೆ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಮುನ್ನುಡಿ ಬರೆದಿದ್ದು, ಬೆನ್ನುಡಿಯನ್ನು ಚಕ್ರವರ್ತಿ ಸೂಲಿಬೆಲೆ ಬರೆದಿದ್ದಾರೆ. ಈ ಕೃತಿಯನ್ನು ಡಾ.ಎಸ್.ಎಲ್.ಭೈರಪ್ಪ ಬಿಡುಗಡೆಗೊಳಿಸುವರು. ಸಂಸದ ಪ್ರತಾಪ್ ಸಿಂಹ, ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಪಾಲ್ಗೊಳ್ಳಲಿದ್ದು, ರೋಹಿತ್ ಚಕ್ರತೀರ್ಥ ಕೃತಿ ಕುರಿತು ಮಾತನಾಡಲಿದ್ದಾರೆ ಎಂದು ತಿಳಿಸಿದರು.


ಡಿ.8ಕ್ಕೆ ಬಹುರೂಪಿ
ಈ ಸಲದ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಡಿ.8ರಿಂದ 15ರವರೆಗೆ ಜರುಗಲಿದೆ. ‘ಭಾರತೀಯತೆ’ ವಸ್ತುವಿಷಯದ ಮೇಲೆ ರಂಗೋತ್ಸವ ರೂಪಿಸಲಾಗುತ್ತಿದೆ. ನಾಟಕಗಳು, ಚಲನಚಿತ್ರೋತ್ಸವ, ಜನಪದೋತ್ಸವ, ವಿಚಾರಸಂಕಿರಣವೂ ನಡೆಯಲಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net