‘ಟಿಪ್ಪು ನಿಜ ಕನಸುಗಳು’ ಕೃತಿಯಲ್ಲಿ ಶೇ.99ರಷ್ಟು ಸುಳ್ಳು

577d99eb-8869-44a8-8b86-b5eb22dbca8d
Published on

ಮೈಸೂರು: ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ರಚನೆಯ ‘ಟಿಪ್ಪು ನಿಜ ಕನಸುಗಳು’ ನಾಟಕ ಕೃತಿಯಲ್ಲಿ ಶೇ. 99ರಷ್ಟು ಸುಳ್ಳು ಇದೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ್ (ಜನ್ನಿ) ಆರೋಪಿಸಿದರು.
ಈ ಕೃತಿಯನ್ನು ನಾನು ಓದಿದ್ದೇನೆ. ಆದರೆ, ನಾಟಕ ನೋಡಿಲ್ಲ. ಪುಸ್ತಕದಲ್ಲಿ ಬರೀ ಸುಳ್ಳನ್ನೇ ತುಂಬಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಮೈಸೂರು ರಂಗಾಯಣ ಮಲಿನವಾದ ನಂತರ ನಾನು ಅಲ್ಲಿಂದ ದೂರವಾದೆ. ಅಂದಿನಿಂದ ಈವರೆಗೂ ಅಲ್ಲಿಗೆ ಕಾಲು ಹಾಕಿಲ್ಲ. ಒಂದು ನಾಟಕ ನೋಡಲು ಪೊಲೀಸ್ ಭದ್ರತೆಯೊಂದಿಗೆ ಪ್ರೇಕ್ಷಕರನ್ನು ಒಳಗಡೆ ಬಿಟ್ಟು ನಡೆಸುವಂತಹ ಅವಶ್ಯಕತೆ ಇರಲಿಲ್ಲ. ಇಂತಹ ಪರಿಸ್ಥಿತಿ ರಂಗಭೂಮಿಯ ಇತಿಹಾಸದಲ್ಲಿ ಎಲ್ಲೂ ನಡೆದಿಲ್ಲ. ಇದರಿಂದ ರಂಗಭೂಮಿಗೆ ಭಾರಿ ಹೊಡೆತ ಬಿದ್ದಿದೆ ಎಂದರು.

ನಾನು ರಂಗಭೂಮಿ ನಿರ್ದೇಶಕನಾಗಿದ್ದಾಗ ‘ಪೋಲಿಸರನ್ನು ಪ್ರೇಕ್ಷಕರಾಗಿ ಬನ್ನಿ, ರಕ್ಷಣೆ ಕೊಡುವ ದೃಷ್ಟಿಯಿಂದ ಬರಬೇಡಿ’ ಎನ್ನುತ್ತಿದ್ದೆ. ಈಗ ರಂಗಾಯಣವನ್ನು ಈ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಎಂದು ರಂಗಾಯಣ ನಿರ್ದೇಶಕರ ವಿರುದ್ಧ ಹರಿಹಾಯ್ದರು.

ವಿಚಾರ ಸಂಕಿರಣ:

ವಿವಿಧ ಸಂಘಟನೆಗಳ ವತಿಯಿಂದ ‘ಸಂವಿಧಾನ; ಬಹುತ್ವ ಸಂಸ್ಕೃತಿಯತ್ತ ಸಾಗೋಣ ಬನ್ನಿ’ ವಿಚಾರ ಸಂಕಿರಣವನ್ನು ನ. 26ರಂದು ಸಂಜೆ 4.30ಕ್ಕೆ ಕಲಾಮಂದಿರದ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಸಂವಿಧಾನ ರಕ್ಷಣೆ ಕುರಿತು ನಾಟಕಕಾರ ಡಾ.ರಾಜಪ್ಪ ದಳವಾಯಿ ವಿಚಾರ ಮಂಡಿಸುವರು. ಜಗದೀಶ್ ಕೊಪ್ಪ, ಬಿ.ಎಂ.ಹನೀಫ್, ಪತ್ರಕರ್ತ ಟಿ.ಗುರುರಾಜ್, ಪ್ರಾಂಶುಪಾಲ ಮಹಮ್ಮದ್ ಕಲೀಮ್, ಕವಿ ಅಜ್ಹೀಜ್ ಪಾಲ್ಗೊಳ್ಳುವರು. ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಮಹತ್ವ ಸಾರುವ ಭಿತ್ತಿಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಸಂಜೆ 6.30ಕ್ಕೆ ಜನಮನ ಮೈಸೂರು ತಂಡದ ವತಿಯಿಂದ ‘ಸಂಬಂಜ ಅನ್ನೋದು ದೊಡ್ದುಕನ’ ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net