

ಹುಬ್ಬಳ್ಳಿ: ಇಲ್ಲಿಯ ಕಿತ್ತೂರ ಚನ್ನಮ್ಮ ವೃತ್ತದ ಈದ್ಗಾ ಮೈದಾನದಲ್ಲಿ ಟಿಪು್ಪ ಸುಲ್ತಾನ್ ಹಾಗೂ ಯಾವುದೇ ಸಮಾಜದವರು ಷರತ್ತಿಗೊಳಪಟ್ಟು ಜಯಂತಿಗಳನ್ನು ಆಚರಣೆ ಮಾಡಬಹುದು ಎಂದು ಮೇಯರ್ ಈರೇಶ ಅಂಚಟಗೇರಿ ತಿಳಿಸಿದರು.
ಮಹಾನಗರ ಪಾಲಿಕೆ ಪ್ರತಿಪಕ್ಷ ಕಾಂಗ್ರೆಸ್ನ ವಿರೋಧ ಹಾಗೂ ಟಿಪು್ಪ ಜಯಂತಿ ಆಚರಣೆಗೆ ಅವಕಾಶ ನೀಡಬೇಕೆಂದು ಮನವಿ ಸಲ್ಲಿಸಿದ್ದ ಎಐಎಂಐಎಂ ಪಕ್ಷದ ಪದಾಧಿಕಾರಿಗಳ ತಕರಾರು ಇದ್ದಾಗ್ಯೂ ಅನುಮತಿ ನೀಡಿರುವುದು ಅಚ್ಚರಿಗೆ ಕಾರಣವಾಯಿತು.
ಈದ್ಗಾ ಮೈದಾನದಲ್ಲಿ ಟಿಪು್ಪ ಜಯಂತಿ ಆಚರಣೆಗೆ ಅವಕಾಶ ನೀಡಬೇಕೆಂದು ಎಐಎಂಐಎಂ ಜಿಲ್ಲಾ ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ ಹಾಗೂ ಕನಕ, ಓಬವ್ವ ಜಯಂತಿ ಆಚರಣೆಗೆ ಕೆಲ ಸಂಘಟನೆಗಳು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ನಿರ್ಧಾರ ಕೈಗೊಳ್ಳಲು ಮೇಯರ್ ಅಂಚಟಗೇರಿ ಅವರು ಬುಧವಾರ ಬೆಳಗ್ಗೆಯಿಂದ ಸಂಜೆಯವರೆಗೂ ನಿರಂತರ ಸಭೆಗಳನ್ನು ನಡೆಸಿದ ನಂತರ ಸಂಜೆ ಸುದ್ದಿಗೋಷ್ಠಿಯಲ್ಲಿ ಪಾಲಿಕೆ ನಿಲುವು ತಿಳಿಸಿದರು.
ವಿರೋಧ ಪಕ್ಷದ ನಾಯಕ ದೊರಾಜ ಮಣಿಕುಂಟ್ಲ ಅವರು ಯಾವುದೇ ತರಹದ ಧಾರ್ವಿುಕ ಆಚರಣೆಗೆ ಅವಕಾಶ ನೀಡಬಾರದು ಎಂದು ಲಿಖಿತ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಈ ಹಿಂದೆ ಗಣೇಶ ಉತ್ಸವಕ್ಕೆ ಅನುಮತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇತರೆ ಸಮಾಜದವರಿಗೆ ತಪು್ಪ ಸಂದೇಶ ಹೋಗಬಾರದು ಎನ್ನುವ ಕಾರಣಕ್ಕೆ ಎಲ್ಲ ಸಮಾಜ, ಧರ್ಮದವರ ಆಚರಣೆಗೆ ಅವಕಾಶ ನೀಡಲಾಗುತ್ತಿದೆ. ಇದಕ್ಕಾಗಿ ಪೊಲೀಸ್ ಇಲಾಖೆಯಿಂದ ಪರವಾನಗಿ ಪಡೆಯಬೇಕು, ಮೈದಾನದಲ್ಲಿನ ಸ್ಮಾರಕಕ್ಕೆ ಯಾವುದೇ ಧಕ್ಕೆಯಾಗದಂತೆ ನಿಗಾ ವಹಿಸಬೇಕು ಎಂಬುದು ಸೇರಿದಂತೆ ನಿಯಮಾವಳಿಗಳನ್ನು ಪಾಲಿಕೆ ಆಯುಕ್ತರು ವಿಧಿಸಲಿದ್ದಾರೆ. ನಿಯಮಾವಳಿ ಪಾಲಿಸುವ ಯಾರೇ ಆಗಲಿ ಅಲ್ಲಿ ಜಯಂತಿ, ಉತ್ಸವ ಆಚರಣೆ ಮಾಡಬಹುದು ಎಂದು ಹೇಳಿದರು.
ಈ ಮಧ್ಯೆ ಕನಕ ಜಯಂತಿ, ಒನಕೆ ಓಬವ್ವ ಜಯಂತಿ ಆಚರಣೆಗೆ ಸಂಘಟನೆಗಳು ಮನವಿ ಮಾಡಿವೆ. ಅವರಿಗೂ ಇದೇ ನಿಯಮಗಳು ಅನ್ವಯವಾಗುತ್ತವೆ ಎಂದರು.
ಸಭಾನಾಯಕ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಈ ಹಿಂದೆ ಮಹಾನಗರ ಪಾಲಿಕೆ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಪಾಲಿಕೆ ಸ್ವಂತ ಆಸ್ತಿಯಾದ ಈದ್ಗಾ ಮೈದಾನ ಬಳಕೆಗೆ ಎಲ್ಲ ಸಾರ್ವಜನಿಕರಿಗೆ ಮುಕ್ತವಾಗಿಡಲು ನಿರ್ಧರಿಸಲಾಗಿದೆ. ಅದರಂತೆ ವಿವಿಧ ನಾಯಕರ ಜಯಂತಿ ಆಚರಣೆಗೆ ಸಂಘಟನೆಗಳು ಮನವಿ ಮಾಡಿದ್ದರಿಂದ ಅನುಮತಿ ನೀಡಲಾಗಿದೆ. ಬಿಜೆಪಿ ಕೂಡ ಪಾಲಿಕೆ ನಿರ್ಧಾರಕ್ಕೆ ಬದ್ಧವಾಗಿದೆ ಎಂದರು.
ಮಣಿಕುಂಟ್ಲ ಆರೋಪ:
ಈದ್ಗಾ ಮೈದಾನದಲ್ಲಿ ಜಯಂತಿ ಆಚರಣೆಗೆ ನಮ್ಮ ವಿರೋಧ ಇದೆ. ಬೇಕಿದ್ದರೆ ಪಾಲಿಕೆ ಆವರಣದಲ್ಲಿ ಟಿಪು್ಪ ಜಯಂತಿ ಮಾಡಲಿ, 5 ಲಕ್ಷ ರೂ. ನಾನೇ ಕೊಡುತ್ತೇನೆ. ಬೆಳಗ್ಗೆಯಿಂದಲೂ ಮೇಯರ್ ಅವರು ಅವಕಾಶ ಇಲ್ಲ ಎನ್ನುತ್ತಿದ್ದರು. ಆದರೆ, ಸಂಜೆ ವೇಳೆಗೆ ಅವರ ಪಕ್ಷದ ಹಿರಿಯ ನಾಯಕರೊಬ್ಬರಿಂದ ಫೋನ್ ಕರೆ ಬಂದ ನಂತರ ಟಿಪು್ಪ ಜಯಂತಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ಇದು ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿರುವ ನಿರ್ಧಾರ ಎಂದು ವಿರೋಧ ಪಕ್ಷದ ನಾಯಕ ದೊರಾಜ ಮಣಿಕುಂಟ್ಲ ಅವರು ಮೇಯರ್ ಪಕ್ಕದಲ್ಲಿ ಕುಳಿತುಕೊಂಡೇ ದೂರಿದರು.
ಎಐಎಂಐಎಂ ತಕರಾರು:
ಮೇಯರ್ ಸುದ್ದಿಗೋಷ್ಠಿ ಮುಗಿಯುತ್ತಿದ್ದಂತೆ ಅಲ್ಲಿಗೆ ಆಗಮಿಸಿದ ಎಐಎಂಐಎಂ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ ಹೊನ್ಯಾಳ ಅವರು, ನಮ್ಮ ಪಕ್ಷದ ಜಿಲ್ಲಾ ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ ಅವರು ಈದ್ಗಾ ಮೈದಾನದಲ್ಲಿ ಟಿಪು್ಪ ಜಯಂತಿ ಆಚರಿಸಲು ನ. 7ರಂದು ಪಾಲಿಕೆಗೆ ಮನವಿ ನೀಡಿರುವುದು ಅವರ ವೈಯಕ್ತಿಕ ವಿಚಾರ. ಈ ಬಗ್ಗೆ ಪಕ್ಷದ ಸಭೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ. ನಿರ್ಧಾರ ಕೂಡ ಆಗಿಲ್ಲ. ಗುಂಟ್ರಾಳ ಅವರ ಮನವಿ ಪಾಲಿಕೆ ಪರಿಗಣಿಸಬಾರದು. ಟಿಪು್ಪ ಬಗ್ಗೆ ನಮಗೆ ಗೌರವ ಇದೆ. ಆದರೆ, ಈದ್ಗಾದಲ್ಲಿ ಜಯಂತಿ ಆಚರಣೆಗೆ ನಮ್ಮ ವಿರೋಧ ಇದೆ ಎಂದು ತಿಳಿಸಿದರು.
ಒಂದು ವೇಳೆ ಜಯಂತಿ ಆಚರಣೆಗೆ ಅನುಮತಿ ಕೊಟ್ಟ ನಂತರ ಶಾಂತಿ ಭಂಗವಾದರೆ ಅದಕ್ಕೆ ಪಕ್ಷದ ಕಾರ್ಯಕರ್ತರು ಹೊಣೆಯಲ್ಲ. ಗುಂಟ್ರಾಳ್ ಅವರ ವಿಷಯವನ್ನು ಈಗಾಗಲೇ ಪಕ್ಷದ ನಾಯಕರಿಗೆ ತಿಳಿಸಲಾಗಿದೆ. ಪಾಲಿಕೆಗೆ ನೀಡಿರುವ ಮನವಿಯನ್ನು ಅವರು ವಾಪಸ್ ಪಡೆಯಲು ತಿಳಿಸಿ ಹೇಳುತ್ತೇವೆ. ಒಂದು ವೇಳೆ ತೆಗೆದುಕೊಳ್ಳದಿದ್ದರೆ ಅದರ ಬಗ್ಗೆಯೂ ನಾಯಕರಿಗೆ ಮಾಹಿತಿ ನೀಡುತ್ತೇವೆ ಎಂದು ಹೊನ್ಯಾಳ ಉತ್ತರಿಸಿದರು.