

ಮೈಸೂರು: ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಟಿಪ್ಪುವಿನ ಬಗ್ಗೆ ಪುಸ್ತಕ ಬರೆಯಲು ಟಿಪ್ಪು ಕಾಲದಲ್ಲಿ ಹುಟ್ಟಿದ್ದನಾ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶ್ನಿಸಿದರು.
ಟಿಪ್ಪು ಕನ್ನಡ ವೇದಿಕೆ ವತಿಯಿಂದ ರಾಜೀವ್‌ನಗರದಲ್ಲಿ ಗುರುವಾರ ಆಯೋಜಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡ್ಡಂಡ ಕಾರ್ಯಪ್ಪ ಬರೆದಿರುವ ‘ಟಿಪ್ಪು ನಿಜ ಕನಸುಗಳು’ ಕೃತಿಯನ್ನು ಖಂಡಿಸುತ್ತೇನೆ. ಟಿಪ್ಪು ಸುಲ್ತಾನ್ 80 ಸಾವಿರ ಕೊಡವರನ್ನು ಹತ್ಯೆ ಮಾಡಿದನೆಂದು ಸಂಸದ ಪ್ರತಾಪ್ ಸಿಂಹ ಹೇಳುತ್ತಾನೆ. ಅಂದು ಮೈಸೂರು ಸಾಮ್ರಾಜ್ಯದಲ್ಲಿ ಎಷ್ಟು ಜನಸಂಖ್ಯೆಯಿತ್ತು ಎಂಬ ಸಾಮಾನ್ಯ ಜ್ಞಾನವೂ ಸಂಸದನಿಗೆ ಇಲ್ಲ ಎಂದು ಟೀಕಿಸಿದರು.
ಟಿಪ್ಪು 80 ಸಾವಿರ ಜನರನ್ನು ಕೊಂದ, 40 ಸಾವಿರ ಜನರನ್ನು ಮತಾಂತರ ಮಾಡಿದ ಎಂಬುದು ಕಥೆಯಷ್ಟೇ. ಏಕೆಂದರೆ, ಅಂದಿನ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಇದು ತಾಳೆ ಆಗುವುದೇ ಇಲ್ಲ. ಟಿಪ್ಪುವಿನ ಬಗ್ಗೆ ಸರಿಯಾಗಿ ತಿಳಿದುಕೊಳ್ಳದವರು ಏನೇನೋ ಅಪಪ್ರಚಾರ ಮಾಡುತ್ತಾರೆ. ಟಿಪ್ಪು ಸುಲ್ತಾನ್ ಕನ್ನಡ ನಾಡಿನ ಸ್ವಾಭಿಮಾನದ ಸಂಕೇತ. ಆತ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಇತಿಹಾಸವನ್ನು ತಿರುಚುವ ಕೆಲಸವನ್ನು ಯಾರೂ ಮಾಡಬಾರದು. ಟಿಪ್ಪು ಸುಲ್ತಾನ್ ಆಡಳಿತ, ಧೈರ್ಯ, ಶೌರ್ಯ, ಕೆಚ್ಚೆದೆಯ ಹೋರಾಟಗಳನ್ನು ಯಾರೂ ಅಲ್ಲಗೆಳೆಯಲು ಸಾಧ್ಯ ಇಲ್ಲ ಎಂದರು.
ಟಿಪ್ಪು ಶತ್ರುಗಳ ವಿರುದ್ಧ ಮಂಡಿಯೂರದ ಏಕೈಕ ಸುಲ್ತಾನ. ಟಿಪ್ಪುವನ್ನು ಟಿಪ್ಪು ಎಂದು ಕರೆಯಲು ಯಾವ ಪಕ್ಷವಾದರೇನು? ನಾನು ಬಿಜೆಪಿಯ ವಿಧಾನ ಪರಿಷತ್ ಸದಸ್ಯನಾದರೂ ಯಾವಾಗಲೂ ಟಿಪ್ಪು ಅಭಿಮಾನಿ. ಆತ ಸ್ವಾಭಿಮಾನಿ ಕನ್ನಡಿಗ, ಮೈಸೂರು ಹುಲಿ. ಜಾತಿ, ಧರ್ಮ, ಪಕ್ಷವನ್ನು ಮೀರಿದ ವ್ಯಕ್ತಿತ್ವ. ಚರಿತ್ರೆಯನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಯಾರು ಏನೇ ಹೇಳಿದರೂ ಚರಿತ್ರೆ ಬದಲಾಗುವುದಿಲ್ಲ ಎಂದು ಗುಡುಗಿದರು.