ಟಿಪ್ಪರ್‌ಗಳ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

17blrp1
Published on

ಬೇಲೂರು: ತಾಲೂಕಿನ ಮಲ್ಲಮಹಳ್ಳಿ ಗ್ರಾಮದ ಮೂಲಕ ಹಾದು ಹೋಗುವ ಟಿಪ್ಪರ್ ಲಾರಿಗಳಿಂದಾಗಿ ಅಪಘಾತ ಸೇರಿದಂತೆ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಅಧಿಕಾರಿಗಳು ಟಿಪ್ಪರ್ ಲಾರಿಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಮಲ್ಲನಹಳ್ಳಿ ಗ್ರಾಮಸ್ಥರು ರಸ್ತೆ ತಡೆದು ಭಾನುವಾರ ಸಂಜೆ ಪ್ರತಿಭಟನೆ ನಡೆಸಿದರು.


ಮಲ್ಲನಹಳ್ಳಿ ಗ್ರಾಮದ ಪ್ರಮೋದ್ ಮಾತನಾಡಿ, ನಮ್ಮ ಗ್ರಾಮದಿಂದ 6 ಕಿ.ಮೀ. ದೂರದ ಸಂಶೆಟ್ಟಿಹಳ್ಳಿ ಗ್ರಾಮದ ಕಾವಲಿನಲ್ಲಿ ನಾಲ್ಕು ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಪ್ರತಿನಿತ್ಯ 100ಕ್ಕೂ ಹೆಚ್ಚಿನ ಟಿಪ್ಪರ್ ಲಾರಿಗಳು ಹಗಲು ರಾತ್ರಿ ಎನ್ನದೆ ಸಂಚರಿಸುತ್ತವೆ. ಟಿಪ್ಪರ್ ಲಾರಿಗಳು ಮುಂದಿನ ಹಾಗೂ ಅಕ್ಕಪಕ್ಕದ ವಾಹನಗಳಿಗೆ ಜಾಗ ಬಿಡದೆ ಮುನ್ನುಗ್ಗುತ್ತಾರೆ. ಇದರಿಂದ ಸಣ್ಣಪುಟ್ಟ ವಾಹನಗಳವರು ಜೀವ ಭಯದಿಂದ ಪಕ್ಕಕ್ಕೆ ಸರಿದು ಸಾಕಷ್ಟು ಅಪಘಾತ ಸಂಭವಿಸಿವೆ. ಜತೆಗೆ ಲಾರಿಗಳ ವೇಗದಿಂದ ಗ್ರಾಮದ ಮನೆಗಳಲ್ಲೆಲ್ಲ ಧೂಳಿನಮಯವಾಗಿವೆ. ಇತ್ತೀಚೆಗೆ ಟಿಪ್ಪರ್ ಲಾರಿಯವರು ಬೈಕ್ ಸವಾರನಿಗೆ ಹೋಗಲು ಜಾಗ ಬಿಡದ ಕಾರಣ ಬೈಕ್ ಪಕ್ಕದಲ್ಲಿದ್ದ ಮಗುವಿಗೆ ಗುದ್ದಿದ್ದರಿಂದ ಮಗು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಮುಂದೆ ಹೀಗಾಗದಂತೆ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಟಿಪ್ಪರ್ ಲಾರಿಗಳ ವಿರುದ್ಧ ಕ್ರಮಕೈಗೊಂಡು ಗ್ರಾಮಸ್ಥರಿಗೆ ನ್ಯಾಯ ಕೊಡಿಸಬೇಕು ಎಂದರು.


ಗ್ರಾಮದ ರಘು ಮಾತನಾಡಿ, ರಸ್ತೆಯಲ್ಲಿ ಟಿಪ್ಪರ್ ಲಾರಿಗಳು ಸಂಚರಿಸಲು ನಾವು ಬೇಡ ಎನ್ನುವುದಿಲ್ಲ. ದಿನನಿತ್ಯ ಧೂಳಾಗದಂತೆ ನೀರು ಹಾಕಬೇಕು, ರಸ್ತೆ ವಿಸ್ತರಿಸಬೇಕು. ಟಿಪ್ಪರ್ ಲಾರಿ ಚಾಲಕರು ಗ್ರಾಮದ ಸಮೀಪ ನಿಧಾನವಾಗಿ ಚಲಿಸಬೇಕು. ಕಾರಣ ರಸ್ತೆಯ ಎರಡು ಬದಿಯಲ್ಲೂ ಶಾಲೆ ಮತ್ತು ಅಂಗನವಾಡಿ ಕೇಂದ್ರವಿದೆ. ಇದನ್ನು ಅರಿತು ಹೋದರೆ ಪರವಾಗಿಲ್ಲ. ಅತಿವೇಗದಿಂದ ಚಲಿಸಿದರೆ ಇಲ್ಲಿ ಯಾವ ಕಾರಣಕ್ಕೂ ಸಂಚರಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.


ಪ್ರತಿಭಟನೆಯಲ್ಲಿ ಮಲ್ಲನಹಳ್ಳಿ ಗ್ರಾಮಸ್ಥರಾದ ತೀರ್ಥಕುಮಾರ್, ಕಾಂತರಾಜ್, ಮಂಜಣ್ಣ, ಮಂಜುನಾಥ, ಜಗದೀಶ್, ನಾಗರಾಜ್, ತೇಜಮೂರ್ತಿ, ರವೀಶ್, ರಾಜೇಶ್, ಪಾಪು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net