ಟಿಪ್ಪರ್ ಹರಿದು 18 ಕುರಿ ಸಾವು, 40ಕ್ಕೂ ಹೆಚ್ಚು ಗಂಭೀರ

Published on

ನಂಜನಗೂಡು: ತಾಲೂಕಿನ ಹೆಡಿಯಾಲ ಬೇಗೂರು ಮುಖ್ಯರಸ್ತೆಯಲ್ಲಿ ಗುರುವಾರ ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಕುರಿ ಮಂದೆಯ ಮೇಲೆ ಹರಿದ ಪರಿಣಾಮ 18 ಕುರಿಗಳು ಸ್ಥಳದಲ್ಲೇ ಮೃತಪಟ್ಟರೆ, 40ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡಿವೆ. ಅಲ್ಲದೆ, ಕುರಿಗಾಯಿಯೊಬ್ಬರ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೆಡಿಯಾಲ ಮುಖ್ಯರಸ್ತೆಯಲ್ಲಿರುವ ಇಂದಿರಾನಗರ ಸಮೀಪ ಅಪಘಾತ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದ ಮುರುಳಿ ಎಂಬುವರಿಗೆ ಸೇರಿದ ಮಂದೆ ಕುರಿಗಳನ್ನು ಮೇಯಿಸುತ್ತಿದ್ದ ಮೂವರು ಮಂದೆಯನ್ನು ಕರೆದೊಯ್ಯುತ್ತಿದ್ದರು. ಈ ವೇಳೆ ಗುಂಡ್ಲುಪೇಟೆಯಿಂದ ಹೆಡಿಯಾಲ ಕಡೆಗೆ ತೆರಳುತ್ತಿದ್ದ ಎಂ.ಸ್ಯಾಂಡ್ ತುಂಬಿದ್ದ ಟಿಪ್ಪರ್ ಲಾರಿಯೊಂದು ವೇಗವಾಗಿ ಕುರಿ ಮಂದೆ ಮೇಲೆ ನುಗ್ಗಿದ ಪರಿಣಾಮ ಈ ಅವಘಡ ಸಂಭವಿಸಿದೆ. ಇನ್ನು ಗಾಯಗೊಂಡು ನರಳಾಡುತ್ತಿದ್ದ ಕುರಿಗಳ ಯಾತನೆ ನೋಡುಗರ ಹೃದಯ ಕಲಕುವಂತಿತ್ತು.

ಈ ಸಂದರ್ಭ ಕುರಿಗಳನ್ನು ಕರೆದೊಯ್ಯುತ್ತಿದ್ದ ಕುರಿಗಾಹಿ ಬೊಮ್ಮಣ್ಣ ಅವರಿಗೂ ಗಂಭೀರ ಗಾಯಗಳಾಗಿದ್ದು, ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸಂಭವಿಸಿದ ಬಳಿಕ ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದು, ಈ ಸಂಬಂಧ ಹುಲ್ಲಹಳ್ಳಿ ಠಾಣೆ ಪೊಲೀಸರು ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net