

ಚಾಮರಾಜನಗರ : ಟಿಪ್ಪರ್ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ, ಬೈಕ್ ಸವಾರನಿಗೆ ಕಾಲು ಕಳೆದುಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಆರ್ ಟಿ ಒ ಸರ್ಕಲ್ ನಲ್ಲಿ ರಸ್ತೆ ಅಪಘಾತ ನಡೆದಿದ್ದು, ಕೇರಳದ ಮಲ್ಲಪುರಂ ಯುವಕ ಜಾಸ್ಮೀನ್ (35) ಕಾಲು ಕಳೆದುಕೊಂಡಿರುವ ಯುವಕ.
ಬುಧವಾರ ಬೆಳಗ್ಗೆ ಗುಂಡ್ಲುಪೇಟೆ ಪಟ್ಟಣದ ಆರ್ ಟಿ ಒ ಸರ್ಕಲ್ ನಲ್ಲಿ ಟಿಪ್ಪರ್ ಕೆ.ಎ. 10 ಎ 6398 ಬೈಕ್ ಗೆ ಗುದ್ದಿ 20 ಮೀಟರ್ ದೂರು ಎಳೆದೊಯ್ದ ಹಿನ್ನಲೆಯಲ್ಲಿ ಬೈಕ್ ಸವಾರ ಜಾಸ್ಮೀನ್ ಗೆ ಕಾಲು ಸಂಪೂರ್ಣ ಜಖಂ ಆಗಿದ್ದು, ಕಾಲು ಕತ್ತರಿಸಬೇಕಾಗಿದೆ.
ಘಟನೆ ನಡೆಯುತ್ತಿದ್ದಂತೆ ಟಿಪ್ಪರ್ ಚಾಲಕ ಪರಾರಿಯಾಗಿದ್ದು, ಗಾಯಾಳು ಜಾಸ್ಮೀನ್ ನನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕಳುಹಿಸಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಕೇರಳರ ಮುಖ್ಯರಸ್ತೆಯಲ್ಲಿ ರಸ್ತೆ ಟಿಪ್ಪರ್ ಮತ್ತು ಬೈಕ್ ನಡುವೆ ಭೀಕರ ಅಪಘಾತವಾಗಿ ಮೂವರು ಕೇರಳದ ನಿವಾಸಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇದರ ಬೆನ್ನ ಹಿಂದೆಯೇ ಈ ಘಟನೆ ನಡೆದಿದ್ದು, ಗುಂಡ್ಲುಪೇಟೆ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಸ್ಥಳಕ್ಕೆ ಭೇಟಿ ಕೊಟ್ಟ ಗುಂಡ್ಲುಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ತಲೆ ಮರೆಸಿಕೊಂಡಿರುವ ಚಾಲಕನ ಬಂಧನಕ್ಕೆ ಬಲೆ ಬೀಸಿದ್ದಾರೆ.