ಟಿಕೆಟ್ ವಿಚಾರದ ಅಸಮಾಧಾನಕ್ಕೆ ತೆರೆ

14kglphoto4.........
ಡಾ.ಅಂಬೇಡ್ಕರ್ ಜಯಂತಿ ಅಂಗವಾಗಿ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಕಾಂಗ್ರೆಸ್ ನಾಯಕರು ಹಾಗೂ ಮುಖಂಡರು ಮಾಲಾರ್ಪಣೆ ಮಾಡಿದರು. ಎ.ಆರ್.ಕೃಷ್ಣಮೂರ್ತಿ, ಎಸ್.ಜಯಣ್ಣ, ಜಿ.ಎನ್. ನಂಜುಂಡಸ್ವಾಮಿ ಮತ್ತಿತರಿದ್ದರು.
Published on

ಕೊಳ್ಳೇಗಾಲ: ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಉಂಟಾಗಿರುವ ಅಸಮಾಧಾನ, ಗೊಂದಲಗಳಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ತೆರೆ ಬಿದ್ದಿದೆ ಎಂದು ಎ.ಆರ್.ಕೃಷ್ಣ ಮೂರ್ತಿ ಹೇಳಿದರು.

ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಜಯಂತಿ ಹಿನ್ನ್ನೆಲೆಯಲ್ಲಿ ಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಮಾಜಿ ಶಾಸಕರಾದ ಜಯಣ್ಣ, ಬಾಲರಾಜು, ಜಿ.ಎನ್. ನಂಜುಂಡಸ್ವಾಮಿ ಜತೆಯಲ್ಲಿ ಸಿದ್ದರಾಮಯ್ಯ ಅವರು ಸಭೆ ನಡೆಸಿದ್ದಾರೆ. ಎಲ್ಲರಿಗೂ ಆಶ್ವಾಸನೆ ನೀಡಿದ್ದಾರೆ. ಎಲ್ಲರೂ ಒಗ್ಗೂಡಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ಎಸ್.ಜಯಣ್ಣ ಮಾತನಾಡಿ, ಹೈಕಮಾಂಡ್ ಜತೆ ನಡೆದ ಸಭೆ ಯಶಸ್ವಿಯಾಗಿದೆ. ನಮ್ಮ ನಿರೀಕ್ಷೆಯಂತೆ ಸಭೆಯಲ್ಲಿ ಭರವಸೆಗಳು ಸಿಕ್ಕಿವೆ. ಕೃಷ್ಣಮೂರ್ತಿ ಅವರು ಸಮ್ಮತಿಸಿದ್ದಾರೆ. ಕಾಯ, ವಾಚ, ಮನಸ ಎಆರ್‌ಕೆ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ಜಿಲ್ಲೆಯ 4 ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಲಿದೆ. ರಾಜ್ಯದ ಉದ್ದಗಲಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ತರುವುದೇ ನಮ್ಮ ಉದ್ದೇಶ. ಅಂಬೇಡ್ಕರ್ ಹೆಸರಲ್ಲಿ ಪ್ರಮಾಣ ಮಾಡುತ್ತಿದ್ದು, ಕಾಂಗ್ರೆಸ್ ಗೆಲುವಿಗೆ ದುಡಿಯುತ್ತೇವೆ. ಬಾಬಾ ಸಾಹೇಬರ ಆಶಯಗಳನ್ನು ಅನುಷ್ಠಾನಗೊಳಿಸಲು ಅಧಿಕಾರ ಹಿಡಿಯುತ್ತೇವೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಸದಸ್ಯ ಮಂಜುನಾಥ್, ಪ್ರಶಾಂತ್, ಮನೋಹರ್, ಮಾಜಿ ಸದಸ್ಯ ರಮೇಶ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರವಿ ಬಸ್ತೀಪುರ, ಮುಖಂಡ ಟಿ.ಪಿ ಬಸವಣ್ಣ, ಜಿ.ಎನ್. ಲೋಕೇಶ್, ಶಾಂತರಾಜು ಬಸ್ತೀಪುರ ಇದ್ದರು.

ಮಾಜಿ ಶಾಸಕ ಎಸ್.ಬಾಲರಾಜು ಬಿಜೆಪಿ ಸೇರ‌್ತಾರೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆದಿರುವ ಕುರಿತು ಸುದ್ದಿಗಾರರು ಗಮನ ಸೆಳೆದಾಗ ಮಾಜಿ ಶಾಸಕ ಎಸ್.ಜಯಣ್ಣ ಉತ್ತರಿಸಿ, ಬಾಲರಾಜು ಕಾಂಗ್ರೆಸ್ ತೊರೆಯವುದಿಲ್ಲ. ಅವರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಲಿದ್ದೇವೆ. ಶುಕ್ರವಾರ ಸಂಜೆ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲಿದ್ದು, ನಂತರ ಕ್ಷೇತ್ರಕ್ಕೆ ಆಗಮಿಸಿ ನಮ್ಮೊಂದಿಗೆ ಕೆಲಸ ಮಾಡುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net