

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಮೈಸೂರಿನಲ್ಲಿ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭವನ್ನು ಯಶಸ್ಸಿಯಾಗಿ ನಡೆಸಿರುವ ಹುರುಪಿನಲ್ಲಿರುವ ಜೆಡಿಎಸ್, ಜಿಲ್ಲೆಯಲ್ಲಿ ಬಾಕಿ ಉಳಿಸಿಕೊಂಡಿರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡದೆ ಕಾದುನೋಡುವ ತಂತ್ರಕ್ಕೆ ಅಂಟಿಕೊಂಡಿದೆ.
ಕಾಂಗ್ರೆಸ್, ಬಿಜೆಪಿಗಿಂತ ಮೊದಲೇ ಜೆಡಿಎಸ್, ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿತು. 2022ರ ಡಿಸೆಂಬರ್ 19ರಂದು ಮೊದಲ ಪಟ್ಟಿಯಲ್ಲಿ 93 ಹುರಿಯಾಳುಗಳ ಹೆಸರು ಬಿಡುಗಡೆ ಮಾಡಿ ರಣಕಹಳೆಯನ್ನು ಮೊಳಗಿಸಿತ್ತು.
ಜಿಲ್ಲೆಯ 11 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ. ಆದರೆ 4 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡದೆ ಕಾಯ್ದಿರಿಸಿದೆ. ಸೂಕ್ತ ಅಭ್ಯರ್ಥಿ ಕೊರತೆಯಿಂದಾಗಿ ಕಾದು ನೋಡುತ್ತಿದೆ. ಅನ್ಯಪಕ್ಷಗಳಲ್ಲಿರುವ ಟಿಕೆಟ್ ವಂಚಿತರ ಬೇಟೆಗೆ ಬಲೆ ಹಿಡಿದು ನಿಂತಿದೆ. ಕಾಂಗ್ರೆಸ್, ಬಿಜೆಪಿಯಿಂದ ಅಭ್ಯರ್ಥಿಗಳು ಘೋಷಣೆಯಾದ ಬಳಿಕ ಜೆಡಿಎಸ್ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
7 ಅಭ್ಯರ್ಥಿಗಳಿಗೆ ಟಿಕೆಟ್ ಖಚಿತ
ಈಗಾಗಲೇ ಜೆಡಿಎಸ್‌ನ ನಾಲ್ವರು ಹಾಲಿ ಶಾಸಕರಿಗೆ ಟಿಕೆಟ್ ಖಚಿತವಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಹಾಲಿ ಶಾಸಕ ಜಿ.ಟಿ.ದೇವೇಗೌಡ, ಇವರ ಪುತ್ರ, ಮೈಸೂರು- ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡರಿಗೂ ಹುಣಸೂರು ಕ್ಷೇತ್ರದಿಂದ ಟಿಕೆಟ್ ಖಚಿತವಾಗಿದೆ.
ಪಿರಿಯಾಪಟ್ಟಣದಿಂದ ಕೆ.ಮಹದೇವ್, ಕೆ.ಆರ್.ನಗರದಿಂದ ಸಾ.ರಾ.ಮಹೇಶ್, ತಿ.ನರಸೀಪುರದಿಂದ ಅಶ್ವಿನ್‌ಕುಮಾರ್ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ. ಕಳೆದ ಬಾರಿ ಸೋಲು ಕಂಡಿದ್ದ ಅಭಿಷೇಕ್(ವರುಣ), ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್(ಕೃಷ್ಣರಾಜ) ಅವರಿಗೂ ಟಿಕೆಟ್ ಖಚಿತವಾಗಿದೆ. ಈ ಕ್ಷೇತ್ರಗಳಲ್ಲಿ ಪ್ರಬಲ ಆಕಾಂಕ್ಷಿಗಳು ಇರಲಿಲ್ಲ, ಯಾವುದೇ ಗೊಂದಲವೂ ಇರಲಿಲ್ಲ. ಆದ್ದರಿಂದ ಹೆಸರು ಪ್ರಕಟಿಸಿದೆ. ಟಿಕೆಟ್ ಪಕ್ಕಾ ಆಗಿರುವ ಅಭ್ಯರ್ಥಿಗಳು ಉತ್ಸಾಹದಿಂದಲೇ ಈಗಾಗಲೇ ಮತಪ್ರಚಾರ ಶುರು ಮಾಡಿದ್ದಾರೆ. ಇನ್ನೂ ಟಿಕೆಟ್ ಖಚಿತವಾಗದ ಆಕಾಂಕ್ಷಿಗಳು ‘ಏನಾಗಲಿದೆಯೋ?’ ಎಂಬ ತಳಮಳದಲ್ಲೇ ಮುಳುಗಿದ್ದಾರೆ.
4 ಕ್ಷೇತ್ರಗಳಲ್ಲಿ ಟಿಕೆಟ್ ಘೋಷಿಸಿಲ್ಲ:
ನರಸಿಂಹರಾಜ, ಚಾಮರಾಜ, ನಂಜನಗೂಡು, ಎಚ್.ಡಿ.ಕೋಟೆ ಕ್ಷೇತ್ರಗಳ ಜೆಡಿಎಸ್ ಟಿಕೆಟ್ ಪ್ರಕಟವಾಗಿಲ್ಲ. ಈ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳಿಲ್ಲ ಅಥವಾ ಯಾರಿಗೆ ಟಿಕೆಟ್ ನೀಡಬೇಕೆಂಬ ಗೊಂದಲವಿದೆ. ಹೀಗಾಗಿ, ಕಾಂಗ್ರೆಸ್, ಬಿಜೆಪಿ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ ಎಂಬುದರ ಮೇಲೆ ಜೆಡಿಎಸ್ ದಾಳ ಉರುಳಿಸಲಿದೆ.
ನಂಜನಗೂಡಿನಲ್ಲಿ ಸ್ಪರ್ಧೆಗೆ ಹಿಂದೇಟು
ನಂಜನಗೂಡಿನ ಕಾಂಗ್ರೆಸ್ ಟಿಕೆಟ್ ಬಯಸಿದ್ದ ಆರ್.ಧ್ರುವನಾರಾಯಣ ನಿಧನದಿಂದ ಈ ಕ್ಷೇತ್ರದ ರಾಜಕೀಯ ಚಿತ್ರಣವೇ ಬದಲಾಗಿದೆ. ಅನುಕಂಪದ ಅಲೆ ಎದ್ದಿದೆ. ಜತೆಗೆ, ಸಾರ್ವಜನಿಕ ವಲಯದಲ್ಲಿ ದರ್ಶನ್ ಧ್ರುವನಾರಾಯಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕೆಂಬ ಕೂಗು ಕೇಳಿಬರುತ್ತಿದೆ. ಈ ರಾಜಕೀಯ ಸಂದಿಗ್ಧ ಪರಿಸ್ಥಿತಿಯಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿ ಹಾಕುವ ಕುರಿತು ಯೋಚಿಸುವಂತೆ ಮಾಡಿದೆ. ಮೊದಲೇ ಇಲ್ಲಿ ಸೂಕ್ತ, ಪ್ರಬಲ ಅಭ್ಯರ್ಥಿ ಕೊರತೆ ತೀವ್ರವಾಗಿ ಕಾಡುತ್ತಿದೆ. ಹೀಗಾಗಿ, ಏನು ಮಾಡುತ್ತದೆ ಎಂಬುದು ಕೌತುಕ.
ಎನ್‌ಆರ್‌ನಲ್ಲಿ ಕಾಯುವಿಕೆ:
ಅಲ್ಪಸಂಖ್ಯಾತರ ಪ್ರಭಾವಳಿ ಹೆಚ್ಚಿರುವ ನರಸಿಂಹರಾಜದಲ್ಲಿ ಟಿಕೆಟ್ ಅನ್ನು ಯಾರಿಗೂ ಜಾ.ದಳ ಖಚಿತಪಡಿಸಿಲ್ಲ. ಕಳೆದ ಬಾರಿ ಸೋಲು ಕಂಡಿದ್ದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜತೆಗೆ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಎನ್‌ಆರ್ ಕಡೆಗೆ ಬರುವ ಸಾಧ್ಯತೆ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ನಡುವೆ, ಜನತಾದಳ ಮೂಲದ ಮುಖಂಡರೊಬ್ಬರು ಬಿಜೆಪಿಯಿಂದ ಮರಳುವ ಸಾಧ್ಯತೆ ಇದೆ. ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದರೆ, ಅವರನ್ನು ಸೆಳೆಯುವ ಆಲೋಚನೆ ಇದೆ.
ಚಾಮರಾಜದಲ್ಲಿ ಅನ್ಯರಿಗೆ ಗಾಳ:
ಒಕ್ಕಲಿಗ ಮತದಾರರು ಹೆಚ್ಚಿರುವ ಚಾಮರಾಜದಲ್ಲಿ ಜೆಡಿಎಸ್ ಚಿತ್ರಣ ಅಸ್ಪಷ್ಟವಾಗಿದೆ. ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಶಾಸಕ ವಾಸು, ಹರೀಶ್‌ಗೌಡ ನಡುವೆ ಬಿರುಸಿನ ಪೈಪೋಟಿ ಏರ್ಪಟ್ಟಿದೆ. ಇವರಲ್ಲಿ ಯಾರಿಗೆ ಟಿಕೆಟ್ ಕೈತಪ್ಪುತ್ತದೆಯೋ ಅವರಿಗೆ ಗಾಳ ಹಾಕಲು ಜೆಡಿಎಸ್ ತುದಿಗಾಲಿನ ಮೇಲೆ ನಿಂತಿದೆ. ಹರೀಶ್‌ಗೌಡ ಜೆಡಿಎಸ್ ಮೂಲದವರು. ಕಳೆದ ಬಾರಿ ಟಿಕೆಟ್ ಸಿಗದ ಕಾರಣಕ್ಕೆ ಜೆಡಿಎಸ್ ಬಿಟ್ಟು ಪಕ್ಷೇತರವಾಗಿ ಸ್ಪರ್ಧೆ ಮಾಡಿ, ಬಳಿಕ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದಾರೆ. ಇವರು ಮತ್ತೆ ಹಳೇಗೂಡಿಗೆ ಬರಬಹುದು ಎಂಬ ನಿರೀಕ್ಷೆ ಜೆಡಿಎಸ್ ಮುಖಂಡರಲ್ಲಿದೆ.
ಕೋಟೆಯಲ್ಲಿ ತಳಮಳ:
ಎಚ್.ಡಿ.ಕೋಟೆಯಲ್ಲೂ ಟಿಕೆಟ್ ಗೊಂದಲ ಇದೆ. ಗಣಿ ಉದ್ದಿಮೆದಾರ ಕೃಷ್ಣನಾಯಕ್ ಮತ್ತು ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್ ನಡುವೆ ತೀವ್ರ ಪೈಪೋಟಿಯಿದೆ. ಯಾರಿಗೆ ಟಿಕೆಟ್ ಕೊಟ್ಟರೂ ಬಂಡಾಯ ಮೊಳಗಬಹುದು. ಆದ್ದರಿಂದ ಕೊನೇ ಘಳಿಗೆಯಲ್ಲಿ ತೀರ್ಮಾನ ಹೊರಬೀಳಬಹುದು.
ಜಯಪ್ರಕಾಶ್ ಅವರಿಗೆ ಟಿಕೆಟ್ ಅಂತಿಮ ಎಂಬ ಮಾತು ಕೇಳಿಬರುತ್ತಿದೆ. ಕೃಷ್ಣನಾಯಕ್ ಪರ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಒಲವಿದೆ. ಆದರೆ, ಕೃಷ್ಣನಾಯಕ್ ಜಿಲ್ಲಾ ಮಟ್ಟ ನಾಯಕರೊಂದಿಗೆ ವಿರೋಧ ಕಟ್ಟಿಕೊಂಡಿದ್ದಾರೆ. ಹೀಗಾಗಿ, ಕೃಷ್ಣನಾಯಕ್ ಬಿಟ್ಟು ಜಯಪ್ರಕಾಶ್‌ಗೆ ಟಿಕೆಟ್ ಕೊಡಲು ನಿರ್ಧಾರವಾಗಿದೆ ಎಂದು ಮೂಲಗಳು ತಿಳಿಸಿವೆ.
ಕೈ ಪಟ್ಟಿ ರೆಡಿ:
ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಜಿಲ್ಲೆಯ 11 ಕ್ಷೇತ್ರಗಳಲ್ಲಿ ಕೃಷ್ಣರಾಜ, ಚಾಮರಾಜ, ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಪ್ರಕಟಿಸಿಲ್ಲ. ಉಳಿದ 8 ಕ್ಷೇತ್ರಗಳ ಪೈಕಿ, ಹಾಲಿ ಶಾಸಕರಾದ ಹುಣಸೂರಿನ ಎಚ್.ಪಿ.ಮಂಜುನಾಥ್, ನರಸಿಂಹರಾಜದ ತನ್ವೀರ್ ಸೇಠ್ ಮತ್ತು ಎಚ್.ಡಿ.ಕೋಟೆಯ ಸಿ.ಅನಿಲ್‌ಕುಮಾರ್ ಅವರಿಗೆ ಮತ್ತೆ ಅವಕಾಶ ನೀಡಿದೆ. ಕಳೆದ ಬಾರಿ ಸೋತಿದ್ದ ಮಾಜಿ ಶಾಸಕ ಕೆ.ವೆಂಕಟೇಶ್(ಪಿರಿಯಾಪಟ್ಟಣ), ಡಾ.ಎಚ್.ಸಿ.ಮಹದೇವಪ್ಪ(ತಿ.ನರಸೀಪುರ), ಡಿ.ರವಿಶಂಕರ್‌ಗೆ (ಕೃಷ್ಣರಾಜನಗರ) ಕೈ ಟಿಕೆಟ್ ಖಚಿತವಾಗಿದೆ. ಕೆಪಿಸಿಸಿ ಕಾರ್ಯಧ್ಯಕ್ಷರಾಗಿದ್ದ ಆರ್.ಧ್ರುವನಾರಾಯಣ ಪುತ್ರ ದರ್ಶನ್ ಅವರನ್ನು ನಂಜನಗೂಡಿನಿಂದ ಸ್ಪರ್ಧೆಗಿಳಿಸುತ್ತಿದೆ.
ಬಿಜೆಪಿ ಪಟ್ಟಿ ಬಿಡುಗಡೆ ಆಗಿಲ್ಲ:
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಈ ಕುರಿತು ಇದೀಗ ಪ್ರಕ್ರಿಯೆ ಆರಂಭಿಸಿರುವ ಆ ಪಕ್ಷ, ವಾರದೊಳಗೆ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ.