

ಹುಬ್ಬಳ್ಳಿ, ಮೀಸಲಾತಿ ಅದಲು ಬದಲು, ಮೇಯರ್ ಮುತ್ತಣ್ಣ, ಪಕ್ಷದ ವರಿಷ್ಠರ ಅವಕೃಪೆ,
ಹುಬ್ಬಳ್ಳಿ: ಪಕ್ಷದ ವರಿಷ್ಠರ ಅವಕೃಪೆ, ಜಾತಿ ಲೆಕ್ಕಾಚಾರ ಹಾಗೂ ಬದಲಾದ ಮೀಸಲಾತಿ... ಹೀಗೆ ಅನೇಕ ಕಾರಣಗಳಿಂದಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕೆಲವು ಮಾಜಿ ಮೇಯರ್ ಹಾಗೂ ಉಪ ಮೇಯರ್ಗಳು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ.
ಶೇ. 33ರಷ್ಟಿದ್ದ ಮಹಿಳಾ ಮೀಸಲಾತಿ ಪ್ರಮಾಣವನ್ನು ಈ ಬಾರಿ ಶೇ. 50ಕ್ಕೆ ಏರಿಕೆ ಮಾಡಿದ್ದು ಈ ಬದಲಾವಣೆಗೆ ಪ್ರಮುಖ ಕಾರಣವಾಗಿದೆ. ಮಾಜಿ ಮೇಯರ್ಗಳಾದ ವೆಂಕಟೇಶ ಮೇಸ್ತ್ರಿ, ಪೂರ್ಣಾ ಪಾಟೀಲ, ಅಶ್ವಿನಿ ಮಜ್ಜಗಿ, ಡಿ.ಕೆ. ಚವ್ಹಾಣ ಹಾಗೂ ಉಪ ಮೇಯರ್ಗಳಾದ ಭಾರತಿ ಪಾಟೀಲ, ನಾರಾಯಣ ಜರತಾರಘರ, ಸ್ಮಿತಾ ಜಾಧವ, ಲಕ್ಷ್ಮಿಬಾಯಿ ಬಿಜವಾಡ, ಮೇನಕಾ ಹುರುಳಿ ಈ ಬಾರಿ ಸ್ಪರ್ಧಿಸುತ್ತಿಲ್ಲ. 2018-19ನೇ ಸಾಲಿನಲ್ಲಿ ಮೇಯರ್ ಆಗಿದ್ದ ಸುಧೀರ ಸರಾಫ್ ಕೆಲ ತಿಂಗಳ ಹಿಂದೆ ನಿಧನರಾಗಿದ್ದಾರೆ.
ವೆಂಕಟೇಶ ಮೇಸ್ತ್ರಿ ಅವರು ಬಿಜೆಪಿಯಲ್ಲಿದ್ದಾಗ ಒಮ್ಮೆ ಮೇಯರ್ ಹಾಗೂ ಮತ್ತೊಮ್ಮೆ ಉಪ ಮೇಯರ್ ಸಹ ಆಗಿದ್ದರು. ಹಿಂದಿನ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಬಳಿಕ ಕಾಂಗ್ರೆಸ್ ಸೇರ್ಪಡೆಯಾದ ಅವರು ಈ ಬಾರಿ ಬದಲಾದ ಮೀಸಲಾತಿಯ ಕಾರಣಕ್ಕೆ ಪತ್ನಿಗೆ (ಚಂದ್ರಿಕಾ ಮೇಸ್ತ್ರಿ) 56ನೇ ವಾರ್ಡ್ನಿಂದ ಸ್ಪರ್ಧಿಸಲು ಕೈ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿಯ ಪೂರ್ಣಾ ಪಾಟೀಲ ಈ ಬಾರಿ ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ. ಮಾಜಿ ಮೇಯರ್ ಅಶ್ವಿನಿ ಮಜ್ಜಗಿ ಬದಲು ಅವರ ಪತಿ ತಿಪ್ಪಣ್ಣ ಮಜ್ಜಗಿ 38ನೇ ವಾರ್ಡ್ನಿಂದ ಸ್ಪರ್ಧಿಸಿದ್ದಾರೆ. ಡಿ.ಕೆ. ಚವ್ಹಾಣ ಅವರಿಗೆ ಬಿಜೆಪಿಯು ಟಿಕೆಟ್ ನಿರಾಕರಿಸಿದೆ.
ಮಾಜಿ ಉಪ ಮೇಯರ್ಗಳಾದ ನಾರಾಯಣ ಜರತಾರಘರ ಹಾಗೂ ಮೇನಕಾ ಹುರುಳಿ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಕೊಟ್ಟಿಲ್ಲ. 45ನೇ ವಾರ್ಡ್ ಪರಿಶಿಷ್ಟ ಪಂಗಡ ಮೀಸಲಾತಿಗೆ ಒಳಪಟ್ಟಿದ್ದರಿಂದ ಮೇನಕಾ ಅವರು 44ನೇ ವಾರ್ಡ್ನಿಂದ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಬಿಜೆಪಿ ವರಿಷ್ಠರನ್ನು ಕೋರಿದ್ದರು. ಆದರೆ, 44ನೇ ವಾರ್ಡ್ ಬಿಜೆಪಿ ಟಿಕೆಟ್ ಉಮಾ ಮುಕುಂದ ಅವರ ಪಾಲಾಗಿದೆ. ಬಿಜೆಪಿಯಿಂದ 2 ಬಾರಿ ಉಪ ಮೇಯರ್ ಆಗಿದ್ದ ಭಾರತಿ ಪಾಟೀಲ ಕಳೆದ ಚುನಾವಣೆಯಲ್ಲಿ ಕೆಜೆಪಿ ಸೇರಿದ್ದರು.
ಹಿಂದಿನ ಚುನಾವಣೆಯಲ್ಲಿ ಕೆಜೆಪಿಯಿಂದ ಆಯ್ಕೆಯಾಗಿದ್ದ ಏಕೈಕ ಪಾಲಿಕೆ ಸದಸ್ಯೆಯಾಗಿದ್ದ ಲಕ್ಷ್ಮಿಬಾಯಿ ಬಿಜವಾಡ ಅವರು ಬಳಿಕ ಬಿಜೆಪಿ ಸೇರಿದ್ದರು. 2017-18ರಲ್ಲಿ ಅವರು ಉಪ ಮೇಯರ್ ಆಗಿದ್ದರು. ಈ ಬಾರಿ ಬಿಜೆಪಿ ಟಿಕೆಟ್ ಸಿಕ್ಕಿಲ್ಲ. 58ನೇ ವಾರ್ಡ್ ಪರಿಶಿಷ್ಟ ಜಾತಿಗೆ ಮೀಸಲಾಗಿರುವುದರಿಂದ ಮಾಜಿ ಉಪ ಮೇಯರ್ ಸ್ಮಿತಾ ಜಾಧವ ಅವರಿಗೆ ಸ್ಪರ್ಧಿಸುವ ಅವಕಾಶ ಕೈ ತಪ್ಪಿದೆ. ಬೇರೆ ವಾರ್ಡ್ಗಳಿಂದ ಸ್ಪರ್ಧಿಸಲು ಅವರು ಪ್ರಯತ್ನಪಟ್ಟಿಲ್ಲ.
ಮಾಜಿ ಉಪ ಮೇಯರ್ ಲಕ್ಷ್ಮಿ ಉಪ್ಪಾರ ಅವರು 47ನೇ ವಾರ್ಡ್ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಮಾಜಿ ಉಪ ಮೇಯರ್ ಚಂದ್ರಶೇಖರ ಮನಗುಂಡಿ 28ನೇ ವಾರ್ಡ್ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
6 ಮಾಜಿಗಳು ಕಣದಲ್ಲಿ
ಈ ಬಾರಿಯ ಪಾಲಿಕೆ ಚುನಾವಣೆ ಕಣದಲ್ಲಿ 6 ಜನ ಮಾಜಿ ಮೇಯರ್ಗಳು ಚುನಾವಣೆ ಕಣದಲ್ಲಿದ್ದಾರೆ. 2 ಬಾರಿ ಮೇಯರ್ ಆಗಿದ್ದ ಡಾ. ಪಾಂಡುರಂಗ ಪಾಟೀಲ ಸತತ 6ನೇ ಬಾರಿ ಆಯ್ಕೆ ಬಯಸಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಬಾರಿ ಅವರು 55ನೇ ವಾರ್ಡ್ನಿಂದ ಕಣದಲ್ಲಿದ್ದಾರೆ. ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿದ ಮೊದಲ ಅವಧಿಗೆ (2008-09) ಮೇಯರ್ ಆಗಿದ್ದ ರಾಧಾಬಾಯಿ ಸಫಾರೆ 60ನೇ ವಾರ್ಡ್ನಿಂದ ಸ್ಪರ್ಧಿಸಿದ್ದಾರೆ. ಮಾಜಿ ಮೇಯರ್ ವೀರಣ್ಣ ಸವಡಿ (46ನೇ ವಾರ್ಡ್) ಹಾಗೂ ಶಿವು ಹಿರೇಮಠ (18) ಬಿಜೆಪಿ ಅಭ್ಯರ್ಥಿಗಳಾಗಿ ಚುನಾವಣೆ ಕಣದಲ್ಲಿದ್ದಾರೆ. ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಮೇಯರ್ ಮಂಜುಳಾ ಅಕ್ಕೂರ 26ನೇ ವಾರ್ಡ್ನಿಂದ ಸ್ಪರ್ಧಿಸಿದ್ದಾರೆ. 2002-03ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮೇಯರ್ ಆಗಿದ್ದ ಪ್ರಕಾಶ ಕ್ಯಾರಕಟ್ಟಿ 52ನೇ ವಾರ್ಡ್ನಲ್ಲಿ ‘ಕೈ’ ಪಡೆಯ ಅಭ್ಯರ್ಥಿಯಾಗಿದ್ದಾರೆ.
ಹಾಲಿ ವಾರ್ಡ್ (ಸಂಖ್ಯೆ 11) ಹಿಂದಿನ ಮೂರು ಅವಧಿಗೆ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಪಕ್ಷ (ಬಿಜೆಪಿ) ನನಗೆ ಅವಕಾಶ ನೀಡಿದ್ದರಿಂದ ಮೂರು ಬಾರಿಯೂ ಆಯ್ಕೆಯಾಗಿದ್ದೆ. ಈ ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಬೇರೆಯವರಿಗೆ ಬಿಟ್ಟು ಕೊಟ್ಟಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ.ಪೂರ್ಣಾ ಪಾಟೀಲ, ಮಾಜಿ ಮೇಯರ್
ವಾರ್ಡ್ನಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೆ. ಟಿಕೆಟ್ ತಪ್ಪಿರುವ ಬಗ್ಗೆ ಬೇಸರವಿದೆ. ಪಕ್ಷದ ನಿರ್ಣಯಕ್ಕೆ ಬದ್ಧನಾಗಿ ಇರುತ್ತೇನೆ.- ನಾರಾಯಣ ಜರತಾರಘರ, ಮಾಜಿ ಉಪ ಮೇಯರ್ನಾವು ಜನರ ಬೆಂಬಲದಿಂದ ಪಾಲಿಕೆಗೆ ಆಯ್ಕೆಯಾದವರು. ಈ ಬಾರಿ ಬಿಜೆಪಿ ಟಿಕೆಟ್ ನೀಡದಿದ್ದರೂ ವಾರ್ಡ್ನ ಮತದಾರರ ಒತ್ತಾಯದ ಮೇರೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ವಾರ್ಡ್ನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವುದು ಮತದಾರರಿಗೆ ಗೊತ್ತಿದೆ.ಲಕ್ಷ್ಮೀ ಉಪ್ಪಾರ, ಮಾಜಿ ಉಪ ಮೇಯರ್