ಟಿಕೆಟ್ ತಪ್ಪಿದ್ದರಿಂದ ಸ್ವಾಭಿಮಾನಕ್ಕೆ ಧಕ್ಕೆ

16kglphoto-3
Published on

ಕೊಳ್ಳೇಗಾಲ: ಕಾಂಗ್ರೆಸ್ ಟಿಕೆಟ್ ವಂಚಿತರಾಗಿ ನೊಂದಿದ್ದ ಮಾಜಿ ಶಾಸಕ ಎಸ್.ಬಾಲರಾಜು ತಮ್ಮ ಬೆಂಬಲಿಗರ ಜತೆ ಭಾನುವಾರ ಸಮಾಲೋಚನೆ ಸಭೆ ನಡೆಸಿ ಮುಂದಿನ ರಾಜಕೀಯ ಭವಿಷ್ಯದ ಉಳಿವಿಗೆ ದಾರಿ ಏನೆಂಬುದನ್ನು ಕಂಡುಕೊಳ್ಳಲು ಅಭಿಪ್ರಾಯ ಸಂಗ್ರಹಿಸಿದರು.

ಪಟ್ಟಣದ ಬಸವೇಶ್ವರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಸಮಾಲೋಚನೆ ಸಭೆಯಲ್ಲಿ ಮುಂದಿನ ರಾಜಕೀಯ ಜೀವನದ ಕುರಿತು ಬೆಂಬಲಿಗರ ಜತೆ ಅಭಿಪ್ರಾಯ ಹಂಚಿಕೊಂಡರು .ಸ್ವಾಭಿಮಾನಕ್ಕೆ ಧಕ್ಕೆಯಾದ ಕಡೆ ಚಪ್ಪಲಿಯನ್ನೂ ಬಿಡದೇ ದೂರ ಉಳಿಯುವುದೇ ಲೇಸು ಎಂಬ ತೀರ್ಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಮಾತುಗಳು ಬಾಲರಾಜು ಕಾಂಗ್ರೆಸ್ ತೊರೆಯುವುದು ಖಚಿತವಾದಂತಿದೆ. ರಾಜಕೀಯ ಭವಿಷ್ಯಕ್ಕಾಗಿ ಯಾವ ಕಡೆ ಹೆಜ್ಜೆ ಹಾಕಲಿದ್ದಾರೆ ಎಂಬ ಬಗ್ಗೆ ಸೋಮವಾರ (ಏ.17)ಬೆಳಗ್ಗೆ 10 ಗಂಟೆಗೆ ತಿಳಿಸುತ್ತೇನೆ ಎಂದು ಬೆಂಬಲಿಗರಿಗೆ ತಿಳಿಸಿದ್ದಾರೆ.

ಕೊಳ್ಳೇಗಾಲ ಕ್ಷೇತ್ರದ ಮೂವರು ಟಿಕೆಟ್ ಆಕಾಂಕ್ಷಿಗಳ ಪಾತ್ರ ಏನೆಂಬದನ್ನು ಕಾಂಗ್ರೆಸ್ ಹೇಳಲಿಲ್ಲ. ಚುನಾವಣಾ ಪ್ರಾರಂಭಕ್ಕೂ ಮುನ್ನ ಎಲ್ಲರಿಗೂ ಭೀಮನ ಪಾತ್ರವೇ ಸಿಗುತ್ತದೆಂದು ಟಿಕೆಟ್ ನಿರೀಕ್ಷೆ ಹುಟ್ಟಿಸಿದ್ದರು. ನಮ್ಮ ನಡುವೆ ಪೈಪೋಟಿ ಇತ್ತು. ನಂತರ ಸೌಜನ್ಯಕ್ಕೂ ಒಬ್ಬರಿಗೂ ತಿಳಿಸದೆ ಎಆರ್‌ಕೆಗೆ ಟಿಕೆಟ್ ಕೊಟ್ಟರು. ಇದರಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಈ ಬಗ್ಗೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಕ್ಕೆ, ‘ ಈ ತೀರ್ಮಾನ ಗುಪ್ತಚಾರದ ಮಾಹಿತಿ’ ಎಂದು ಉತ್ತರಿಸಿದರು. ಗುಪ್ತಚಾರ ಮಾಹಿತಿ ಯಾರ ಪರವಾಗಿತ್ತು ಎಂಬುದು ನನಗೆ ತಿಳಿದಿದೆ ಎಂದು ಅಸಮಾಧಾನ ಹೊರ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net