ಟಿಕೆ ಬಡಾವಣೆ ಮಠದಲ್ಲಿ ಆರಾಧನೆ ಸಂಪನ್ನ

mysore
Published on

 ಮೈಸೂರು

ನಗರದ ತೊಣಚಿಕೊಪ್ಪಲು ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಸರಣಿ ಕಾರ್ಯಕ್ರಮದಲ್ಲಿ  ಮಧ್ಯಾರಾಧನೆ ವೈಭವದಿಂದ ನೆರವೇರಿತು.

ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ರಾಯರ ಮೃತ್ತಿಕಾ ವೃಂದಾವನಕ್ಕೆ ಜಲ ಅಭಿಷೇಕ, ಫಲ ಪಂಚಾಮೃತ ಅಭಿಷೇಕ, ಸರ್ವ ಸೇವೆ ಸಂಪನ್ನಗೊಂಡಿತು. ವಿವಿಧ ಪರಿಮಳಭರಿತ ಪುಷ್ಪಗಳಿಂದ ವೃಂದಾವನಕ್ಕೆ, ಕಡಗೋಲು ಗೋಪಾಲಕೃಷ್ಣ ಮತ್ತು ಆಂಜನೇಯನ ಮೂರ್ತಿಗಳಿಗೆ ಮಾಡಿದ ಅಲಂಕಾರ ಗಮನ ಸೆಳೆಯಿತು.

ಪ್ರಧಾನ ಅರ್ಚಕ ಗಿರೀಶ ಆಚಾರ್ಯ, ಶ್ರೀಕಾಂತ ಆಚಾರ್ಯ, ಸುಧನ್ವ ಮತ್ತು ವಿಜಯೇಂದ್ರ ಅವರು ಪೂಜಾ ಕಾರ್ಯದ ನೇತೃತ್ವ ವಹಿಸಿದ್ದರು. ಭಕ್ತರು ಪ್ರತ್ಯೇಕವಾಗಿ ರಾಯರ ಪಾದುಕೆಗಳಿಗೆ ಪಾದಪೂಜೆ, ಕನಕಾಭಿಷೇಕ ನೆರವೇರಿಸಿ ಧನ್ಯತೆ ಮೆರೆದರು.

ಬೆಳಗ್ಗೆ 9ಕ್ಕೆ ವಿವಿಧ ಭಜನಾ ಮಂಡಳಿ ಸದಸ್ಯರು ದಾಸರ ಕೀರ್ತನೆ ಹಾಡಿ ಭಕ್ತಿ ಭಾವ ಸಮರ್ಪಿಸಿದರು. ಭಕ್ತರಿಗೆ ತೀರ್ಥ, ಮಂತ್ರಾಕ್ಷತೆ ವಿತರಣೆ ನಡೆಯಿತು. ಶಾಸಕ ಟಿ.ಎಸ್.ಶ್ರೀವತ್ಸ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಮರ್ಪಿಸಿದರು. ಮಧ್ಯಾಹ್ನ 3 ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನಸಂತರ್ಪಣೆ ಮಾಡಲಾಯಿತು.

ರಂಜಿಸಿದ ಕಛೇರಿ: ಸಂಜೆ ಮಠದ ಸಭಾಂಗಣದಲ್ಲಿ ವಿದ್ವಾಂಸರಾದ ಮೈಸೂರು ಮಂಜುನಾಥ್, ಮಾಳವಿಕಾ ತಂಡದಿಂದ ಪಿಟೀಲು ವಾದನ ಕಛೇರಿ ರಂಜಿಸಿತು. ಪಕ್ಕವಾದ್ಯದಲ್ಲಿ ವಿದ್ವಾಂಸರಾದ ಟಿ.ಎ. ರಾಮಾನುಜನ್ (ಮೃದಂಗ) ಮತ್ತು ಅರ್ಜುನಕುಮಾರ್ (ಮೋರ್ಚಿಂಗ್) ಸಹಕಾರ ನೀಡಿದರು. ನೂರಾರು ಭಕ್ತರು ಸಂಜೆ ವೇಳೆಯೂ ರಾಯರ ದರ್ಶನ ಪಡೆದು ಧನ್ಯತೆ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net