ಟಿಎಸ್​ಎಸ್​ಗೆ 2.15 ಕೋ.ರೂ. ಲಾಭ

2SIRSI4
Published on

ಶಿರಸಿ: ರೈತ ಸದಸ್ಯರ ಸೇವೆಯಲ್ಲಿ 97 ವರ್ಷ ಪೂರೈಸಿ ಮುನ್ನಡೆಯುತ್ತಿರುವ ಇಲ್ಲಿನ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ (ಟಿಎಸ್​ಎಸ್) 2019-20ನೇ ಸಾಲಿನಲ್ಲಿ 2.15 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಷೇರುದಾರ ಸದಸ್ಯರಿಗೆ ಶೇ.20ರ ಲಾಭಾಂಶ ಘೊಷಿಸಿದೆ.

ಸಂಘದ 2019-20ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆ ನ.3ರಂದು ಮಧ್ಯಾಹ್ನ 3 ಗಂಟೆಗೆ ಜರುಗಲಿದ್ದು, ಸಂಘದ ವಾರ್ಷಿಕ ಅಢಾವೆಯಲ್ಲಿ ಈ ಮಾಹಿತಿ ನೀಡಲಾಗಿದೆ. ಸಂಘವು ವರದಿ ವರ್ಷದಲ್ಲಿ ಒಟ್ಟು 874 ಕೋಟಿ ರೂ. ವಹಿವಾಟು ನಡೆಸಿದೆ. ಸಂಘದ ದಲಾಲಿ ವಿಭಾಗದಲ್ಲಿ 1.80 ಲಕ್ಷ ಕ್ವಿಂಟಾಲ್ ವಿಕ್ರಿ ಮಾಡಿ 457 ಕೋಟಿ ರೂ. ವಹಿವಾಟು ನಡೆಸಲಾಗಿದೆ. ಸಂಘದ ಸಿಹಿ ಅಡಕೆ ಪುಡಿ ವಿಭಾಗದಲ್ಲಿ 31 ಕೋಟಿ ರೂ. ವಹಿವಾಟು ನಡೆಸಲಾಗಿದ್ದು, 6,750 ಕ್ವಿಂಟಾಲ್ ಅಡಕೆ ವಿನಿಯೋಗಿಸಲಾಗಿದೆ. ಸಂಘದ ಅಡಕೆ ಖರೀದಿ ವಿಭಾಗದಲ್ಲಿ 74,484 ಕ್ವಿಂಟಾಲ್ ಅಡಕೆ ಖರೀದಿಸಿ, ಸಂಸ್ಕರಿಸಿ 204 ಕೋಟಿ ರೂ. ವಹಿವಾಟು ನಡೆಸಿ 3 ಕೋಟಿ ರೂ. ಲಾಭ ಗಳಿಸಲಾಗಿದೆ. ಸಂಘದ ಸುಪರ್ ಮಾರ್ಕೆಟ್​ನ ಕಿರಾಣಿ ಹಾಗೂ ಕೃಷಿ ವಿಭಾಗದಲ್ಲಿ 175 ಕೋಟಿ ರೂ. ವಹಿವಾಟು ನಡೆಸಿ 5.31 ಕೋಟಿ ರೂ. ಲಾಭ ಗಳಿಸಲಾಗಿದೆ ಎಂದು ತಿಳಿಸಲಾಗಿದೆ.

ಸಂಘದಲ್ಲಿ ಸದಸ್ಯರ ಠೇವಣಿ 206 ಕೋಟಿ ರೂ.ಗೆ ಏರಿದ್ದು, ಸಂಘದ ಸ್ವಂತ ಠೇವಣಿ ವಿವಿಧ ಸಂಸ್ಥೆಗಳಲ್ಲಿ 73 ಕೋಟಿ ರೂ. ಆಗಿದೆ. ಸಂಘದ ವ್ಯಕ್ತಿ ಸದಸ್ಯರಿಗೆ 188.16 ಕೋಟಿ ರೂ. ಸಾಲ ನೀಡಿದ್ದು, ಪ್ರಾಥಮಿಕ ಸಹಕಾರಿ ಸಂಘಗಳಿಗೆ 8.76 ಕೋಟಿ ಸಾಲ ನೀಡಿದೆ. ಖರೀದಿದಾರರಿಗೂ 74.30 ಕೋಟಿ ಉದ್ರಿ ನೀಡಿದ್ದು ಇದರಿಂದ ಅಡಕೆ ಮಾರುಕಟ್ಟೆ ಒಂದು ಸ್ಥಿರ ದರದಲ್ಲಿ ನಿಲ್ಲುವಂತಾಗಿದೆ. ಸಿದ್ದಾಪುರ ಶಾಖೆಯಲ್ಲಿ 32 ಸಾವಿರ ಕ್ವಿಂಟಾಲ್ ಅಡಕೆ ವಿಕ್ರಿ ಆಗಿದ್ದರೆ, ಯಲ್ಲಾಪುರದಲ್ಲಿಯೂ 35 ಸಾವಿರ ಕ್ವಿಂಟಾಲ್ ಅಡಕೆ ವಿಕ್ರಿ ವರದಿ ವರ್ಷದಲ್ಲಿ ಆಗಿದೆ. ಮುಂಡಗೋಡ ಶಾಖೆ ಹಾಗೂ ಶಿರಸಿಯಲ್ಲಿ 1,182 ಟನ್ ಜೋಳ ಖರೀದಿಸಲಾಗಿದೆ. ಸಂಘದ ಸ್ವಂತ ಬಂಡವಾಳ 123.05 ಕೋಟಿಗೆ ಏರಿದೆ. ಗಳಿಸಿದ ಒಟ್ಟು ದಲಾಲಿ 4.93 ಕೋಟಿಗಳಾಗಿದ್ದು, ಒಟ್ಟು ಲಾಭದ ಪೂರ್ವದಲ್ಲಿ 17.83 ಕೋಟಿ ರೂ. ವಿವಿಧ ನಿಧಿಗೆ ತೆಗೆದಿರಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ 7.02 ಕೋಟಿ ರೂ. ಮೌಲ್ಯದ ಧಾರಾ ಹಿಂಡಿಯ 58,235 ಚೀಲಗಳನ್ನು ವಿಕ್ರಿ ಮಾಡಲಾಗಿದೆ. ಸಂಘದ ದೈನಂದಿನ ವಹಿವಾಟುಗಳಿಂದ ಸದಸ್ಯರಿಗೆ ಅನುಕೂಲ ಕಲ್ಪಿಸುವುದರ ಜತೆಗೆ ಸಂಘವು ಸರ್ಕಾರಕ್ಕೂ ವಿವಿಧ ತೆರಿಗೆ ರೂಪದಲ್ಲಿ 35.75 ಕೋಟಿ ರೂ.ಗಳನ್ನು ಸಂದಾಯ ಮಾಡಿದೆ ಎಂದು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net