

ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ, ನವೋದಯ ಕ್ರಿಕೆಟ್ ಕ್ಲಬ್ ಮತ್ತು ಜೈ ಹಿಂದ್ ಕ್ರಿಕೆಟ್ ಕಬ್ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಲೆಜೆಂಡ್ಸ್ ಪ್ರೀಮಿಯರ್ ಲೀಗ್ ಟಿ10 ಕ್ರಿಕೆಟ್’ ಪಂದ್ಯಾವಳಿಗೆ ಶನಿವಾರ ಚಾಲನೆ ದೊರೆಯಿತು.
ಮಾನಸಗಂಗೋತ್ರಿಯಲ್ಲಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನ, ಎಸ್‌ಜೆಸಿಇ ಮೈದಾನದಲ್ಲಿ ಲೀಗ್ ಪಂದ್ಯಗಳು ನಡೆದವು.
ಮೈಸೂರು, ಬೆಂಗಳೂರು, ಶಿವಮೊಗ್ಗ, ತುಮಕೂರು ತಂಡಗಳು ಮತ್ತು ಕರ್ನಾಟಕದ ಉಳಿದ ಭಾಗಗಳಿಂದ ಬಂದಿರುವ ಸಂಯೋಜಿತ ತಂಡವೂ ಪಾಲ್ಗೊಂಡಿವೆ. ರಣಜಿ ಟ್ರೋಫಿ, ಕರ್ನಾಟಕ ರಾಜ್ಯ ಮೈಸೂರು ವಿಭಾಗ ಮತ್ತು ವಿಶ್ವವಿದ್ಯಾಲಯ ಕ್ರಿಕೆಟ್ ತಂಡಗಳನ್ನು ಪ್ರತಿನಿಧಿಸಿರುವ ಸುಮಾರು 100 ಕ್ರಿಕೆಟಿಗರು ಈ ಎರಡು ದಿನಗಳ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ಟೂರ್ನಿಯನ್ನು ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಉದ್ಘಾಟಿಸಿದರು. ಕೆಎಸ್‌ಸಿಎ ಸಂಸ್ಥೆಯ ಮೈಸೂರು ವಲಯದ ಸಂಚಾಲಕ ಆರ್.ಕೆ.ಹರಿಕೃಷ್ಣಕುಮಾರ್, ಲೀಗ್ ಅಧ್ಯಕ್ಷರೂ ಆದ ಮೈವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪಿ. ಕೃಷ್ಣಯ್ಯ, ಲೀಗ್ ಸಂಘಟನಾ ಸಮಿತಿ ಸದಸ್ಯರಾದ ಎಂ.ಆರ್.ಆನಂದ್, ಡಾ.ಮನ್ಸೂರ್ ಅಹಮದ್, ಎ.ಸುಧೀಂದ್ರ, ಡಾ.ಕೃಷ್ಣಕುಮಾರ್ ಹಾಜರಿದ್ದರು. ಮೇ 21ರಂದು ಸಂಜೆ 4ಕ್ಕೆ ವಿಜೇತ ತಂಡಕ್ಕೆ ಬಹುಮಾನ ವಿತರಣೆ ಮಾಡಲಾಗುತ್ತದೆ.