ಬಳ್ಳಾರಿ : ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬೇಸರ ಕಳೆಯಲು ಟಿ.ವಿ. ನೀಡುವಂತೆ ಕಾರಾಗೃಹ ಇಲಾಖೆಯ ಉತ್ತರ ವಲಯದ ಡಿಐಜಿ ಟಿ.ಪಿ. ಶೇಷ ಅವರ ಬಳಿ ಮನವಿ ಮಾಡಿದ್ದಾರೆ.
ಈಗಾಗಲೇ ಡಿಐಜಿ ಟಿ.ಪಿ. ಶೇಷ ಜೈಲು ಅಧೀಕ್ಷಿಕ ಲತಾ ಅವರಿಗೆ ಟಿವಿ ನೀಡುವಂತೆ ಸೂಚಿಸಲಾಗಿದೆ. ಈಗಾಗಲೇ ಜೈಲಿನಲ್ಲಿರುವ ಕೈದಿಗಳ ಸೆಲ್‌ಗಳಿಗೆ ಟಿವಿ ಅಳವಡಿಸಲಾಗಿದೆ. ಆದರೆ, ದರ್ಶನ್ ಪ್ರಕರಣ ಹೈ ಪ್ರೊಪೈಲ್‌ಯಾಗಿರುವುದರಿಂದ ಜೈಲು ನಿಯಮ ಅನುಸರಿಸಿ ಟಿವಿ ನೀಡಲಾಗುವುದು. ಜೈಲಿನಲ್ಲಿ ಹಳೆಯ ಟಿವಿಯಿದ್ದು, ಅದನ್ನು ರಿಪೇರಿ ಮಾಡಿ ದರ್ಶನ್ ಸೆಲ್‌ಗೆ ಹಾಕಿಸಲಾಗುವುದು ಎಂದು ಜೈಲು ಅಧೀಕ್ಷಕಿ ಲತಾ ತಿಳಿಸಿದರು.ಸದ್ಯ ದರ್ಶನ್ ಬೆಂಗಳೂರಿನ ಪರಪ್ಪನ ಆಗ್ರಹಾರದ ಜೈಲಿನಿಂದ ತಂದಿದ್ದ ಪುಸ್ತಕಗಳ ಜತೆ ಇನ್ನೂ ಕೆಲ ಪುಸ್ತಕಗಳು ಓದಿ ಬೇಸರದ ಒಂಟಿತನ ಕಳೆಯುತ್ತಿದ್ದಾರೆ. ಅಲ್ಲದೆ, ಹೈ ಸೆಕ್ಯೂರಿಟಿ ಜೈಲಿನಲ್ಲಿರುವ ದರ್ಶನ್ ಬೆಳ್ಳಗೆ ಹಾಗೂ ಸಂಜೆ ಕೆಲ ಕಾಲ ವಾಕ್ ಮಾಡಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮಂಗಳವಾರ ಬೆಳ್ಳಗೆ ಉಪಹಾರಕ್ಕೆ ಚಿತ್ರನ್ನ, ಮಧ್ಯಾಹ್ನ ಅನ್ನ, ಸಾಂಬರ್ ಹಾಗೂ ರಾತ್ರಿ ಅನ್ನ, ಸಾಂಬರ್ ಜತೆಗೆ ಮೊಟ್ಟೆ ಸೇವನೆ ಮಾಡಿದ್ದಾರೆ ಎಂದು ಜೈಲು ಸಿಬ್ಬಂದಿ ತಿಳಿಸಿದರು.