

ಸುಗ್ಗರಾಜು ಜಿ.ಕೆ. ನೆಲಮಂಗಲ ರಸ್ತೆ, ಚರಂಡಿ, ಕಸ ವಿಲೇವಾರಿ, ಕುಡಿವ ನೀರು ಸೇರಿ ವಿವಿಧ ಮೂಲಸೌಕರ್ಯ ವಂಚಿತವಾಗಿರುವ ತಾಲೂಕಿನ ಟಿ.ಬೇಗೂರು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ನಿವಾಸಿಗಳು ಪಂಚಾಯಿತಿ ಆಡಳಿತಕ್ಕೆ ಬೇಸತ್ತು ಹೋಗಿದ್ದಾರೆ. ಪಂಚಾಯಿತಿಯಲ್ಲಿ ಪ್ರೇತಕಳೆ ತುಂಬಿದ್ದು, ಜನಪ್ರತಿನಿಧಿಗಳದು ಎಲ್ಲದಕ್ಕೂ ಜಾಣ ಮೌನವಾದರೆ, ಇಲ್ಲಿನ ಸಿಬ್ಬಂದಿಯದು ಜಾಣ ಮರೆವು. ಪರಿಣಾಮವಾಗಿ ಮೂಲಸೌಕರ್ಯಗಳು ಇಲ್ಲಿ ನಾಸ್ತಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಪಂಚಾಯಿತಿಯ ವಿವಿಧ ಗ್ರಾಮಗಳಲ್ಲಿ ವ್ಯವಸ್ಥಿತ ರಸ್ತೆ, ಚರಂಡಿ ನಿರ್ಮಾಣ ಮಾಡಿಲ್ಲ, ವಿದ್ಯುತ್ ದೀಪ ನಿರ್ವಹಣೆ ಸೇರಿ ತ್ಯಾಜ್ಯ ವಿಲೇವಾರಿಯಂತಹ ಕೆಲಸಗಳನ್ನೂ ಸಿಬ್ಬಂದಿ ಕಡೆಗಣೆಸಿದ್ದಾರೆ ಎಂಬುದು ಗ್ರಾಮಸ್ಥರು ಆರೋಪವಾಗಿದೆ. ಸಾಂಕ್ರಾಮಿಕ ರೋಗಗಳ ಭೀತಿ: ಟಿ.ಬೇಗೂರು, ಅರಳೇದಿಬ್ಬ, ಕಂಬಯ್ಯನಪಾಳ್ಯ, ಬೈರನಹಳ್ಳಿ, ಗೆದ್ದಲಹಳ್ಳಿ ಸೇರಿ ಕೆಲ ವಸತಿ ಪ್ರದೇಶದಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಿಲ್ಲ, ಚರಂಡಿ ಸೌಲಭ್ಯ ಇಲ್ಲದೇ ಮಲಿನ ನೀರು ರಸ್ತೆ, ತಗ್ಗು ಪ್ರದೇಶಗಳಿಗೆ ಹರಿದು ಸೊಳ್ಳೆಗಳ ತಾಣವಾಗಿ ರೂಪುಗೊಂಡಿದ್ದು, ರೋಗ ಹರಡುವ ಕೇಂದ್ರವಾಗಿ ಬದಲಾಗಿವೆ. ಜನರಿಂದಲೇ ಶ್ರಮದಾನ: ಪಂಚಾಯಿತಿ ಆಡಳಿತ ಅವ್ಯವಸ್ಥೆಗೆ ಬೇಸತ್ತ ಕೆಲ ಗ್ರಾಮಸ್ಥರೇ ಸ್ವಂತ ಖರ್ಚಿನಲ್ಲಿ ಜೆಸಿಬಿ ತರಿಸಿ ಚರಂಡಿಯಲ್ಲಿನ ಮಣ್ಣು, ಕಸವನ್ನು ಹೊರ ತೆಗೆಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದ್ದಾರೆ. ಅಲ್ಲದೆ ಕೆಲವು ಕಡೆಗಳಲ್ಲಿ ಸ್ವಂತ ಖರ್ಚಿನಲ್ಲಿ ಕಸ ವಿಲೇವಾರಿ ಮಾಡಿಸಿದ್ದಾರೆ. ಪಂಚಾಯಿತಿಗೆ ಕಟ್ಟುವ ತೆರಿಗೆ ಹಣ ಏನಾಗುತ್ತಿದೆ, ಜನಪ್ರತಿನಿಧಿಗಳು, ಸಿಬ್ಬಂದಿ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಈ ಪಂಚಾಯಿತಿಯಲ್ಲಿ ಯಾವುದೇ ಉತ್ತರ ಸಿಗುವುದಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶವಾಗಿದೆ. ಕನಸು ನನಸಾಗಿಲ್ಲ: ಗ್ರಾಮಪಂಚಾಯಿತಿಯಲ್ಲಿನ ರಾಜಕೀಯದಿಂದಾಗಿ ಗ್ರಾಮದಲ್ಲಿ ಕಾಯ್ದಿರಿಸಲಾಗಿರುವ ಜಾಗದಲ್ಲಿ ಉಚಿತ ನಿವೇಶನ ಹೊಂದುವ ಬಡವರ ಕನಸು ನನಸಾಗಿಲ್ಲ. ಬೇಸಿಗೆಯಲ್ಲಿ ಉದ್ಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಮನವಿಗೂ ಸ್ಪಂದಿಸಿಲ್ಲ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳನ್ನು ಕುರಿತು ಗ್ರಾಮಸ್ಥರು ಪಿಡಿಒ ಭೇಟಿ ಮಾಡಿ ಗಮನ ಸೆಳೆದಿದ್ದಾರೆ, ವಿಲೇವಾರಿಯಾಗದೆ ಬಿದ್ದಿರುವ ಕಸದ ರಾಶಿ, ಕೆಟ್ಟ ವಿದ್ಯುತ್ ದೀಪ ನಿರ್ವಹಣೆ ಸೇರಿ ವಿವಿಧ ಸಮಸ್ಯೆ ಬಗೆ ಹರಿಸುವಂತೆ ಮನವಿ ಸಲ್ಲಿಸಿದ್ದಾರೆ. ಆದರೂ ಅಧಿಕಾರಿಗಳದು ಎಂದಿನಂತೆ ಜಾಣಮೌನ. ಕೆರೆ ಒತ್ತುವರಿ: ಕೆಲ ಪ್ರಭಾವಿ ಮುಖಂಡರು ಕೆರೆ ಅಂಗಳ ಒತ್ತುವರಿ ಮಾಡಿಕೊಂಡು 10ಕ್ಕೂ ಹೆಚ್ಚು ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಇಲ್ಲಿನ ತ್ಯಾಜ್ಯವನ್ನು ಕೆರೆಗೆ ಹಾಕುತ್ತಿದ್ದು, ಕೆರೆ ನೀರು ಕಲುಷಿತವಾಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೀದಿ ದೀಪಗಳಲ್ಲಿದಿರುವುದು ಒಂದೆಡೆಯಾದರೆ ಕೆಟ್ಟಿರುವ ದೀಪಗಳನ್ನು ರಿಪೇರಿ ಮಾಡದಿರುವುದು ಕಳ್ಳಕಾಕರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ಸಂಜೆಯ ವೇಳೆ ಮಹಿಳೆಯರು, ಮಕ್ಕಳು ಮನೆಯಿಂದ ಹೊರಗೆ ಬರಲು ಭಯಪಡುವಂತಾಗಿದೆ. ಮಂಜುನಾಥ್, ಅರಳೇದಿಬ್ಬ ಗ್ರಾಮದ ನಿವಾಸಿ ಗ್ರಾಮಗಳ ವಿವಿಧೆಡೆ ನಿರ್ಮಾಣವಾಗಿರುವ ಕಸದ ಬ್ಲ್ಯಾಕ್ ಸ್ಪಾಟ್‌ಗಳನ್ನು ತೆರವುಗೊಳಿಸಬೇಕು, ಮಣ್ಣು, ಕಸದಿಂದ ತುಂಬಿಹೋಗಿರುವ ಚರಂಡಿಗಳನ್ನು ಸ್ವಚ್ಛಗೊಳಿಸಿಕೊಟ್ಟು ಸಾಂಕ್ರಾಮಿಕ ರೋಗಗಳ ಭೀತಿಯಿಂದ ಜನರನ್ನು ಕಾಪಾಡಬೇಕಿದೆ. ಜಯರಾಮ್, ಟಿ.ಬೇಗೂರು ಗ್ರಾಮದ ನಿವಾಸಿ ಗ್ರಾಮಪಂಚಾಯಿತಿ ಮುಂಭಾಗದಲ್ಲಿ ಹಾದುಹೋಗುವ ರಾಜಗಾಲುವೆ ಸ್ವಚ್ಛಗೊಳಿಸುವಲ್ಲೂ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ರಾಜುಗಾಲುವೆಯಿಂದ ಸಾಕಷ್ಟು ಸಮಸ್ಯೆಯಾಗುತ್ತಿದ್ದು ನೋಣ, ಸೊಳ್ಳೆಗಳ ಕಾಟದಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ರತ್ನಮ್ಮ , ಟಿ.ಬೇಗೂರು ನಿವಾಸಿ