

ಪಾಂಡವಪುರ: ತಾಲೂಕಿನ ಟಿ.ಎಸ್.ಛತ್ರ ಹಾಗೂ ಇಂಗಲಗುಪ್ಪೆ ಗ್ರಾಮಕ್ಕೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗುರುವಾರ ಭೇಟಿ ನೀಡಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು.
ಈ ವೇಳೆ ಗ್ರಾಮಸ್ಥರು ಹೂಗುಚ್ಛ ನೀಡಿ ಶಾಸಕರನ್ನು ಸ್ವಾಗತಿಸಿದರು. ಅಲ್ಲದೆ ಎರಡೂ ಗ್ರಾಮಗಳ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.
ಗ್ರಾಮದ ಪೆಟ್ಟಿ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಬೇಕು. ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡದ ಹೆಂಚುಗಳನ್ನು ದುರಸ್ತಿ ಪಡಿಸುವುದರ ಜತೆಗೆ ಶಾಲೆಯ ಕುವೆಂಪು ರಂಗಮಂಟಪವನ್ನು ದುರಸ್ತಿ ಪಡಿಸಬೇಕು. ಗ್ರಾಮದ ಹಾಲಿನ ಡೈರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಹಾಗೂ ರಾಮಮಂದಿರ ದೇವಸ್ಥಾನವನ್ನು ದುರಸ್ತಿಪಡಿಸಬೇಕು ಎಂದು ಮನವಿ ಮಾಡಿದರು.
ಸುಪ್ರಿಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ದಿ.ಇ.ಎಸ್.ವೆಂಕಟರಾಮಯ್ಯ ಅವರ ಸವಿನೆನಪಿಗಾಗಿ ಉದ್ಯಾನ ಮತ್ತು ಕ್ರೀಡಾಂಗಣ ನಿರ್ಮಿಸಬೇಕು. ಇಂಗಲಗುಪ್ಪೆಯ ಮಾರುತಿ ದೇವಸ್ಥಾನ (ಅಂಜನೇಯ) ದೇವಸ್ಥಾನದವರೆಗೆ ರಸ್ತೆ ದುರಸ್ತಿ ಮಾಡಿಸಬೇಕು. ಜತೆಗೆ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಒದಗಿಸಬೇಕು. ಇಂಗಲಗುಪ್ಪೆಯಲ್ಲಿ ನಿರುದ್ಯೋಗಿ ಯುವಕರು ಹೆಚ್ಚಾಗಿದ್ದು, ಶೀಘ್ರ ಉದ್ಯೋಗ ಕಲ್ಪಿಸಬೇಕು ಹಾಗೂ ವಿನಾಯಕ ದೇವಸ್ಥಾನದ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ಕೊಡಬೇಕು ಎಂದು ಸ್ಥಳೀಯರು ಕೋರಿಕೆ ಸಲ್ಲಿಸಿದರು.
ಇದೇ ವೇಳೆ ಗ್ರಾಮದ ಸರ್ಕಾರಿ ಶಾಲೆಗೆ ಆಗಮಿಸಿದ ಶಾಸಕರನ್ನು ಮಕ್ಕಳು ಆತ್ಮೀಯವಾಗಿ ಸ್ವಾಗತಿಸಿದರು. ರೈತಸಂಘದ ಮುಖಂಡರಾದ ಇ.ಪಿ.ಲೋಕೇಶ್, ಅಶ್ವತ್ಥ, ಇ.ಪಿ.ಕೃಷ್ಣ, ಇ.ಜೆ.ಮಂಜು, ಮಾಯಿಗೌಡ, ಪುಟ್ಟೇಗೌಡ, ಇ.ಎಸ್.ರವಿ, ಜವರಪ್ಪ ಇತರರಿದ್ದರು.