ಟಾರ್ಪಾಲ್ ದಂಧೆಗೆ ಕಡಿವಾಣ ಹಾಕಿ

07 mbl 7
Published on

ಮುಳಬಾಗಿಲು: ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಟಾರ್ಪಾಲ್ ದಂಧೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ

ರೈತ ಸಂಘದಿಂದ ಕೃಷಿ ಇಲಾಖೆ ಮುಂದೆ ಶನಿವಾರ ಪ್ರತಿಭಟನೆ ನಡೆಸಿ ಕೃಷಿ ಸಹಾಯಕ ನಿರ್ದೇಶಕ ಅಮರನಾರಾಯಣರೆಡ್ಡಿ ಅವರಿಗೆ ಮನವಿ ಸಲ್ಲಿಸಿತು.

ರಾಗಿ ತನೆ ಒಣಗಿಸಲು ರೈತರಿಗೆ ಟಾರ್ಪಾಲ್ ಅವಶ್ಯಕತೆ ಇದೆ. ಇದು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಇದನ್ನು ಸರ್ಕಾರದಿಂದಲೇ ರೈತರಿಗೆ ನೀಡಬೇಕು ಮತ್ತು ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ರಾಗಿ ಕಟಾವು, ಒಕ್ಕಣೆ ಯಂತ್ರಗಳನ್ನು ಸರ್ಕಾರದಿಂದಲೇ ನೀಡಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಸುಮಾರು 20 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಉತ್ತಮ ಮಳೆ ಜತೆಗೆ ರಾಗಿ ಬೆಳೆಯೂ ಸಮೃದ್ಧವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ರೈತರು ರಾಗಿ ಕಟಾವು ಮಾಡಬೇಕಿದೆ. ಮಳೆ ಮತ್ತು ಮೋಡದ ವಾತಾವರಣ ಇರುವುದರಿಂದ ರಾಗಿ ಬೆಳೆದಿರುವ ಎಲ್ಲ ರೈತರಿಗೂ ಸರ್ಕಾರಿ ರಿಯಾಯಿತಿ ಧರದಲ್ಲಿ ಟಾರ್ಪಲ್ ವಿತರಣೆ ಮಾಡಬೇಕೆಂದು ಒತ್ತಾಯಿಸಿದರು.

ತಾಲೂಕು ಅಧ್ಯಕ್ಷ ಫಾರೂಖ್‌ಪಾಷಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ರಾಗಿ ಕಟಾವಿಗೆ 500 ರೂ. ನೀಡಿದರೂ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಖಾಸಗಿಯವರ ಕಟಾವು ಯಂತ್ರಗಳಿಗೆ ಸಾವಿರಾರೂ ರೂಪಾಯಿ ಬಾಡಿಗೆ ನೀಡಿ ಕಟಾವು ಮಾಡಿಸಬೇಕಾದ ಪರಿಸ್ಥಿತಿಯಿದೆ ಎಂದರು.

ಹಸಿರುಸೇನೆ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ನವೀನ್, ವೇಣು, ಕೇಶವ, ವಿಜಯ್‌ಪಾಲ್, ಚಲಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐತಾಂಡಹಳ್ಳಿ ಮುನ್ನ, ಈಕಂಬಳ್ಳಿ ಮಂಜುನಾಥ್, ಬಂಗಾರಪೇಟೆ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net