ಹುಲಿಯೂರುದುರ್ಗ: ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಪಟ್ಟಣದ ರಾಜ್ಯ ಹೆದ್ದಾರಿ 85ರಲ್ಲಿ ಹಸಿಗೆಹೊಬಳಿ (ರಾಜೇಂದ್ರಪುರ) ಗ್ರಾಮದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಇರುವ ಟಾರ್ ಪ್ಲಾಂಟ್ನಿಂದ ಉತ್ಪತ್ತಿಯಾಗುವ ಧೂಳಿನಿಂದ ಅಕ್ಕಪಕ್ಕದ ರೈತರು ಕಂಗಾಲಾಗಿದ್ದಾರೆ. ರೇಷ್ಮೆ, ತೆಂಗು, ಅಡಕೆ, ಮಾವಿನ ಬೆಳೆಗಳು ಧೂಳಿನಿಂದ ಹಾಳಾಗಿದ್ದು, ಈ ಬಗ್ಗೆ ತಹಸೀಲ್ದಾರ್, ಪೊಲೀಸ್, ಸ್ಥಳಿಯ ಗ್ರಾಮ ಪಂಚಾಯಿತಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಎರಡು ವರ್ಷಗಳಿಂದ ದೂರು ನೀಡುತ್ತಿದ್ದರೂ ಪರಿಹಾರ ಕಲ್ಪಿಸಿಲ್ಲ ಎಂದು ಸ್ಥಳಿಯರಾದ ಕುಮಾರ್, ವರದರಾಜು, ಚಲುವರಾಜು, ಸತೀಶ್, ಪುಟ್ಟಸ್ವಾಮಿ, ಚಂದ್ರಯ್ಯ ಅಲವತ್ತುಕೊಂಡಿದ್ದಾರೆ. ಈ ಅನಧಿಕೃತ ಟಾರ್ ಪ್ಲಾಂಟ್ನಿಂದಾಗಿ ಬೆಳೆಗಳು ಕೈ ಸೇರದಂತಾಗಿದೆ. ಯಾವುದೇ ಪರವಾನಗಿ ಇಲ್ಲದೆ ಎರಡು ವರ್ಷಗಳಿಂದ ತೆರಿಗೆ ವಂಚಿಸಿ ಅಕ್ರಮವಾಗಿ ನಡೆಯುತ್ತಿರುವ ಟಾರ್ಪ್ಲಾಂಟ್ ಮುಚ್ಚಿಸಿ, ಹಾಳಾಗಿರುವ ಬೆಳೆ ನಷ್ಟವನ್ನು ತುಂಬಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಇನ್ನು ರಾಜೇಂದ್ರಪುರ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಟಾರ್ ಪ್ಲಾಂಟ್ನಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ಮಿಶ್ರಿತ ಹೊಗೆಯ ಕಾರಣದಿಂದ ಸ್ಥಳಿಯರಲ್ಲಿ ಕಾಯಿಲೆ ಭೀತಿ ಎದುರಾಗಿದೆ. ರಾತ್ರಿ ವೇಳೆಯಲ್ಲಿ ನಡೆಯುತ್ತಿದ್ದ ಟಾರ್ಪ್ಲಾಂಟ್ ಈಗ ಹಗಲಿನಲ್ಲಿ ನಡೆಯುತ್ತಿರುವ ಕಾರಣ ರಾಜ್ಯ ಹೆದ್ದಾರಿ 85ರಲ್ಲಿ ಓಡಾಡುವ ವಾಹನ ಸವಾರರಿಗೆ ಸಮಸ್ಯೆಯಾಗಿದ್ದು, ಧೂಳು ಕುಡಿದುಕೊಂಡು ಓಡಾಡುವ ಸ್ಥಿತಿ ನಿಮಾರ್ಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಅನಧಿಕೃತವಾಗಿ ನಡೆಯುತ್ತಿರುವ ಟಾರ್ಪ್ಲಾಂಟ್ ಮುಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ.