

ಗದಗ: ಸ್ವಾತಂತ್ರ್ಯೂರ್ವದಿಂದಲೂ ಪರಿಸರ ಸ್ನೇಹಿಯಾಗಿ ಪ್ರಯಾಣಿಕರಿಗೆ ಸಾರಿಗೆ ಸೇವೆ ನೀಡುವ ಟಾಂಗಾಗಳು ಕಣ್ಮರೆಯಾಗುತ್ತಿವೆ. ಕರೊನಾ ಹೊಡೆತ ತಾಳಲಾರದೆ ಟಾಂಗಾಗಳು ಮೂಲೆಗುಂಪಾಗಿವೆ. ಹೀಗಾಗಿ, ಟಾಂಗಾವಾಲಾಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಗದಗ- ಬೆಟಗೇರಿ ಅವಳಿ ನಗರದಲ್ಲಿರುವ ಬೆರಳೆಣಿಕೆಯಷ್ಟು ಟಾಂಗಾಗಳು ಕೂಡ ಈಗ ತೆರೆಮರೆಗೆ ಸರಿಯುತ್ತಿವೆ. ಮೂರ್ನಾಲ್ಕು ದಶಕಗಳಿಂದ ಅವಳಿ ನಗರದಲ್ಲಿ ಜನರಿಗೆ ಸೇವೆ ನೀಡಿದ್ದ ಟಾಂಗಾವಾಲಾಗಳು ಮೂಲವೃತ್ತಿ ಕೈಬಿಟ್ಟು ಸಣ್ಣಪುಟ್ಟ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಹೋಟೆಲ್, ಗಾರೆ, ಅಟೋ ಚಾಲಕ, ಗೌಂಡಿಗಳಾಗಿ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಕೆಲವರು ಮೂಲವೃತ್ತಿ ಬಿಡಲೂ ಆಗದೇ ಅತ್ತ ಮುಂದುವರಿಸಿಕೊಂಡು ಹೋಗಲೂ ಸಾಧ್ಯವಾಗದೆ ಅತಂತ್ರರಾಗಿದ್ದಾರೆ.
ಈ ಹಿಂದೆ ಆಟೋಗಳು ರಸ್ತೆಗಿಳಿದ ಮೇಲೆ ಜನ ಟಾಂಗಾದಲ್ಲಿ ಸಂಚರಿಸುವುದನ್ನು ನಿಧಾನವಾಗಿ ಕೈಬಿಟ್ಟರು. ಸಮಯದ ಉಳಿತಾಯ ಜತೆಗೆ ಬೇಗನೆ ನಿಗದಿತ ಸ್ಥಳಕ್ಕೆ ತಲುಪಬಹುದು ಎನ್ನುವ ಕಾರಣಕ್ಕೆ ಜನ ಆಟೋಗಳನ್ನು ನೆಚ್ಚಿಕೊಂಡರು. ಹೀಗಾಗಿ ಟಾಂಗಾವಾಲಾಗಳಿಗೆ ಕೆಲಸ ಕಡಿಮೆ ಆಯಿತು. ಇದರಿಂದ ಬೇಸತ್ತ ಅನೇಕ ಟಾಂಗಾವಾಲಾಗಳು ಟಾಂಗಾ ಓಡಿಸುವ ಕೆಲಸವನ್ನೇ ಬಿಟ್ಟರು. ಅಲ್ಲೊಂದು ಇಲ್ಲೊಂದು ಕಾಣಿಸುತ್ತಿದ್ದ ಟಾಂಗಾಗಳು ಕೂಡ ಈಗ ಕರೊನಾ ಅಟ್ಟಹಾಸಕ್ಕೆ ನಲುಗಿ ಮರೆಯಾಗುವ ಹಂತ ತಲುಪಿಲಿವೆ.
24 ಟಾಂಗಾ ಸ್ಟೇಷನ್: 50-60ರ ದಶಕದಲ್ಲಿ ಗದಗ- ಬೆಟಗೇರಿ ಅವಳಿ ನಗರದಲ್ಲಿ ಒಟ್ಟು 24 ಟಾಂಗಾ ನಿಲ್ದಾಣಗಳಿದ್ದವು. 700ಕ್ಕೂ ಹೆಚ್ಚು ಟಾಂಗಾಗಳಿದ್ದವು. ರೈಲು, ಬಸ್ ನಿಲ್ದಾಣ ಸೇರಿ ಸುತ್ತಮುತ್ತಲಿನ ವಸತಿ ಪ್ರದೇಶಗಳಿಗೆ ತೆರಳಲು ಪ್ರಯಾಣಿಕರು ಟಾಂಗಾಗಳನ್ನೇ ಅವಲಂಬಿಸಿದ್ದರು. ಅಲ್ಲದೆ, ಚುನಾವಣೆ, ನಾಟಕ, ವ್ಯಾಪಾರ, ಸಿನೆಮಾ ಹೀಗೆ ವಿವಿಧ ರೀತಿಯ ಪ್ರಚಾರಕ್ಕೆ ಟಾಂಗಾಗಳನ್ನೇ ಬಳಸಲಾಗುತ್ತಿತ್ತು. ಟಾಂಗಾ ನಿಲ್ಲುವ ಸ್ಥಳವನ್ನು ಜನ ಟಾಂಗಾಕೂಟ ಎಂದು ಕರೆಯುತ್ತಿದ್ದರು. ಗದಗ ಹಳೇ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣದಲ್ಲಿ ಸೂರ್ಯೋದಯವಾಗುತ್ತಲೇ ಕುದುರೆ ಹೆಜ್ಜೆಗಳ ಶಬ್ಧ ರಿಂಗಣಿಸುತ್ತಿತ್ತು. ಕಾಲಕ್ರಮೇಣ ಟಾಂಗಾಗಳಿಗೆ ಕೆಲಸವೇ ಇಲ್ಲದಂತಾಯಿತು. ಕರೊನಾ ಸೋಂಕು ವ್ಯಾಪಿಸುವ ಮುನ್ನ ಅವಳಿ ನಗರದಲ್ಲಿ 15ರಿಂದ 20 ಟಾಂಗಾಗಳು ಕಾರ್ಯನಿರ್ವಹಿಸುತ್ತಿದ್ದವು. ಇದೀಗ ರೈಲು ನಿಲ್ದಾಣ ಬಳಿ ಒಂದೆರಡು ಟಾಂಗಾಗಳು ಓಡಾಡುತ್ತಿರುವುದು ಕಂಡುಬರುತ್ತಿದೆ. ಈಗ ಟಾಂಗಾಗಳು ನಿಲ್ಲದಿದ್ದರೂ ಟಾಂಗಾ ಕೂಟ ಎಂಬ ಹೆಸರು ಮಾತ್ರ ಮುಂದುವರಿದಿದೆ.
ಸದ್ಯದ ಸ್ಥಿತಿಯಲ್ಲಿ ಟಾಂಗಾ ಓಡಿಸಿ ಜೀವನ ಮಾಡುವುದು ಅಸಾಧ್ಯದ ಮಾತು. ಇಂದಿನ ವೇಗದ ಜಗತ್ತಿನಲ್ಲಿ ಜನರು ಟಾಂಗಾ ಬಳಕೆ ಮಾಡುತ್ತಿಲ್ಲ. ಬೇಗನೆ ನಿರ್ದಿಷ್ಟ ಸ್ಥಳ ತಲುಪಬೇಕು ಎಂಬ ಧಾವಂತ. ಯಾರಿಗೂ ಸಮಯವಿಲ್ಲ. ಟಾಂಗಾ ಕೊಂಚ ನಿಧಾನ ಎಂಬ ಕಾರಣದಿಂದ ನಮ್ಮ ಕಡೆಗೆ ತಿರುಗಿಯೂ ನೋಡುತ್ತಿಲ್ಲ. 30 ವರ್ಷದಿಂದ ಇದೇ ಕೆಲಸ ಮಾಡಿಕೊಂಡು ಬಂದಿದ್ದೇನೆ. ಇದೀಗ ಕೆಲಸ ಇಲ್ಲ. ನಮ್ಮಂಥವರಿಗೂ ಸರ್ಕಾರ ಸಹಾಯ ಮಾಡಬೇಕು. | ಜಾಫರ್ ಖಾನ್ ಟಾಂಗಾವಾಲಾ
ಕಷ್ಟವಾಗಿದೆ ನಿರ್ವಹಣೆ
ಕಾಲ ಬದಲಾದಂತೆ ಟಾಂಗಾವಾಲಾಗಳಿಗೆ ಕುದುರೆಗಳ ನಿರ್ವಹಣೆಯೂ ಕಷ್ಟವಾಯಿತು. ಕುದುರೆಗೆ ಮೇವು ಮತ್ತಿತರ ಖರ್ಚಿಗೆ ನಿತ್ಯ 150-200 ರೂ. ಬೇಕಾಗುತ್ತದೆ. 50 ಕೆಜಿ ಮೇವಿನ ಮಟ್ಟಿಗೆ 600 ರೂ. ಆಗಿದೆ. ತಿಂಗಳಿಗೆ ಐದಾರು ಸಾವಿರ ರೂ. ಕುದುರೆ ಖರ್ಚು ತೆಗೆದು ಕುಟುಂಬ ನಿರ್ವಹಣೆ ದುಸ್ತರವಾಗಿದೆ ಎಂದು ಟಾಂಗಾವಾಲಾಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.