ಟಾಂಗಾ ಏರಿ ದಂಪತಿ ದಿಬ್ಬಣ

9
Published on

ಮೈಸೂರು: ಅರಮನೆ ನಗರಿ ಮೈಸೂರಿನ ಪಾರಂಪರಿಕ ಬೀದಿಗಳಲ್ಲಿ ಟಾಂಗಾ ಸವಾರಿಯೊಂದಿಗೆ ದಂಪತಿ ದಿಬ್ಬಣವೂ ನಡೆಯಿತು.


ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪಾರಂಪರಿಕ ಟಾಂಗಾ ಸವಾರಿ ಗಮನ ಸೆಳೆಯಿತು.


ರೇಷ್ಮೆ ಪಂಚೆ, ರೇಷ್ಮೆ ಅಂಗಿಯನ್ನು ತೊಟ್ಟ ಪತಿರಾಯರು, ಇವರಿಗೆ ಪೈಪೋಟಿ ನೀಡುವಂತೆ ಬಣ್ಣಬಣ್ಣದ ರೇಷ್ಮೆ ಸೀರೆ ಧರಿಸಿದ ಪತ್ನಿಯರು ತಮ್ಮ ಮದುವೆ ದಿನಗಳನ್ನು ನೆನಪಿಸಿಕೊಳ್ಳುತ್ತಾ ಸಾರೋಟಿನಲ್ಲಿ ಮೈಸೂರು ಸುತ್ತಿದರು. ಒಂದು ಟಾಂಗಾದಲ್ಲಿ ಎರಡು ಜೋಡಿಯಂತೆ 50 ದಂಪತಿ ಉತ್ಸಾಹದಿಂದ ಭಾಗಿಯಾಗಿದ್ದರು. ದಂಪತಿಗೆ ಅರಿಶಿಣ, ಕುಂಕುಮ, ಹಸಿರು ಬಳೆ, ಮೈಸೂರು ಪೇಟ, ಮಲ್ಲಿಗೆ ಹೂವು ಸೇರಿದಂತೆ ಇತರ ವಸ್ತುಗಳನ್ನೊಳಗೊಂಡ ಬಾಗಿನವನ್ನು ಸಮಿತಿಯಿಂದ ನೀಡಲಾಯಿತು.


ಪುರಭವನದಿಂದ ಹೊರಟ ಸವಾರಿಯು ಚಾಮರಾಜಒಡೆಯರ್ ವೃತ್ತ, ಕೃಷ್ಣರಾಜ ಒಡೆಯರ್ ವೃತ್ತ, ಲ್ಯಾನ್ಸ್‌ಡೌನ್ ಕಟ್ಟಡ, ಜಗನ್ಮೋಹನ ಅರಮನೆ, ಮೆಟ್ರೋಪೋಲ್ ವೃತ್ತ, ಆಯುರ್ವೇದ ಆಸ್ಪತ್ರೆ ವೃತ್ತ, ಸಯ್ಯಜಿರಾವ್ ರಸ್ತೆ ಹೀಗೆ ಪಾರಂಪರಿಕ ಕಟ್ಟಡಗಳ ಮುಂದೆ ಸಾಗಿತು. ಈ ಪಯಣದಲ್ಲಿ ಮೈಸೂರಿನ ಚರಿತ್ರೆ, ಪಾರಂಪರಿಕ ಕಟ್ಟಡ ಹಿನ್ನೆಲೆ, ಅದರ ಮಹತ್ವನ್ನು ತಿಳಿಸಿಕೊಡಲಾಯಿತು


ದಸರಾ ಪಾರಂಪರಿಕ ಉಪ ಸಮಿತಿ ಅಧ್ಯಕ್ಷ ಗೋಪಾಲ್ ರಾವ್ ಮಾತನಾಡಿ, ಟಾಂಗಾ ಗಾಡಿಗಳಿಗೂ ಮೈಸೂರಿಗೂ ನಂಟಿದೆ. ದಸರಾ ವೇಳೆ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ಅವರು ಟಾಂಗಾ ಏರಿ ಮೈಸೂರು ಸುತ್ತದೆ ಪ್ರವಾಸ ಮುಗಿಸುವುದಿಲ್ಲ. ಹೀಗಾಗಿ, ಟಾಂಗಾದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.


ಇತಿಹಾಸ ತಜ್ಞರಾದ ಪ್ರೊ.ಶೆಲ್ವಪಿಳ್ಳೆ ಅಯ್ಯಂಗಾರ್, ಪ್ರೊ.ರಂಗರಾಜು, ಪುರಾತತ್ವ ಇಲಾಖೆಯ ಉಪ ನಿರ್ದೇಶಕಿ ಡಾ.ಮಂಜುಳಾ, ಪಾರಂಪರಿಕ ಉಪ ಸಮಿತಿಯ ಉಪಾಧ್ಯಕ್ಷ ನಾಗೇಂದ್ರ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net