

ವಿಜಯವಾಣಿ ಸುದ್ದಿಜಾಲ ಧಾರವಾಡ
ಮುಗಿಲೆತ್ತರದ ಟವರ್ ಏರಿ ಕುಳಿತಿದ್ದ ವ್ಯಕ್ತಿ ಬಿರಿಯಾನಿ, ಸಿಗರೇಟ್ ಕೊಟ್ಟರೆ ಮಾತ್ರ ಇಳಿಯುವುದಾಗಿ ಡಿಮ್ಯಾಂಡ್ ಮೇಲೆ ಡಿಮ್ಯಾಂಡ್ ಇಡುವ ಮೂಲಕ ಸುಮಾರು 3 ಗಂಟೆಗಳ ಕಾಲ ರಕ್ಷಣಾ ಸಿಬ್ಬಂದಿಗೆ ಸತಾಯಿಸಿದ ಘಟನೆ ಇಲ್ಲಿನ ಜುಬಿಲಿ ವೃತ್ತದ ಬಳಿ ಮಂಗಳವಾರ ಸಂಜೆ ನಡೆದಿದೆ.
ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ, ಇಲ್ಲಿನ ಮಾಳಮಡ್ಡಿಯ ಜಾವೇದ ಎಂಬಾತ ಈ ಹೈ ಡ್ರಾಮಾ ನಡೆಸಿದ್ದ. ಸಂಜೆ ಹೊತ್ತಿಗೆ ವ್ಯಕ್ತಿಯೊಬ್ಬ ಟವರ್ ಏರಿದ್ದಾನೆ ಎಂಬ ಮಾಹಿತಿ ಅರಿತ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ, ಆತನನ್ನು ಇಳಿಸಲು ಮನವೊಲಿಸಿದ್ದಾರೆ. ಆತ ಬೇಡಿಕೆ ಇಡುತ್ತಲೇ ಅವರನ್ನು ಕಾಡಿದ್ದಾನೆ. ಬಳಿಕ ಕಾರ್ಯಾಚರಣೆ ನಡೆಸಿ ಸುರಕ್ಷಿಯವಾಗಿ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾನಸಿಕ ಅಸ್ವಸ್ಥ ಟವರ್ ಏರಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ರಕ್ಷಣಾ ಸಿಬ್ಬಂದಿ ಮೇಲೇರಿ ಸಂವಹನ ನಡೆಸಿದಾಗಲೇ ಆತ ಕಳ್ಳ ಎಂದು ಗೊತ್ತಾಗಿದೆ. ರಕ್ಷಣೆಗೆ ಆಗಮಿಸಿದ್ದ ಸಿಬ್ಬಂದಿಗೆ ಕಬ್ಬಿಣದ ಸಲಾಕೆಯಿಂದ ಹೊಡೆಯುವ ಬೆದರಿಕೆ ಸಹ ಒಡ್ಡಿದ್ದ. ಆದಾಗ್ಯೂ ಕೆಳಗಿಳಿಯುವಂತೆ ಮನವೊಲಿಸಿದ್ದಾರೆ. ಆಗ ನಾನು ಕೇಳಿದ್ದನ್ನು ಕೊಟ್ಟರೆ ಮಾತ್ರ ಇಳಿಯುವೆ ಎಂದು ಹೇಳಿದ್ದಾನೆ.
ಅವನ ಮಾತಿಗೆ ರಕ್ಷಣಾ ಸಿಬ್ಬಂದಿ ಒಪ್ಪಿದಾಗ ಮೊದಲು ನೀರಿಗೆ ಡಿಮ್ಯಾಂಡ್ ಮಾಡಿದ್ದಾನೆ. ನೀರು ಕುಡಿದ ಬಳಿಕ ಆತ ಕೇಳಿದಂತೆ ಬಿರಿಯಾನಿ ಸಹ ತಂದು ಕೊಟ್ಟಿದ್ದಾರೆ. ನಂತರ ಸಿಗರೇಟ್ ಕೊಟ್ಟರೆ ಇಳಿಯುವುದಾಗಿ ಹೇಳಿದ್ದ. ಅದಕ್ಕೂ ಸೈ ಎಂದ ಸಿಬ್ಬಂದಿ ಸಿಗರೇಟ್ ಪೂರೈಸಿದ್ದಾರೆ. ಟವರ್ ಮೇಲೆಯೇ ಒಂದು ಸಿಗರೇಟ್ ಸೇದಿದ್ದಾನೆ. ಇಷ್ಟೆಲ್ಲ ಆದ ಬಳಿಕ ನ್ಯಾಯಾಧೀಶರು ಬಂದರೆ ಮಾತ್ರ ಬರುವುದಾಗಿ ನಾಟಕ ಶುರು ಮಾಡಿದ.
ಅವನ ನಾಟಕ ಅರಿತ ಸಿಬ್ಬಂದಿ, ಜಿಲ್ಲಾ ನ್ಯಾಯಾಧೀಶರು ಹಾಗೂ ನಿನ್ನ ಪತ್ನಿ ಬಂದಿದ್ದಾರೆ ಎಂದು ಪುಸಲಾಯಿಸಿದ್ದಾರೆ. ಅದನ್ನು ನಂಬಿ ಕೆಳಗೆ ಇಳಿದಿದ್ದಾರೆ. ಕಳೆಗಿಳಿಯುತ್ತಿದ್ದಂತೆ ವಶಕ್ಕೆ ಪಡೆದ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಜಾವೇದ್ ಟವರ್ ಏರಲು ಕಾರಣ ಏನೆಂಬುದು ಪೊಲೀಸ್ ತನಿಖೆಯಿಂದಲೇ ಗೊತ್ತಾಗಬೇಕಿದೆ.