ಟನ್ ಕಬ್ಬಿಗೆ ₹ 2400 ನಿಗದಿ

Sugar Meeting
Published on

ಬೀದರ್: ಜಿಲ್ಲೆಯ ಸಹಕಾರ ಸೇರಿ ಎಲ್ಕ ಸಕ್ಕರೆ ಕಾರ್ಖಾನೆಗಳಿಗೆ ಪ್ರಸಕ್ತ ಹಂಗಾಮಿಗೆ ಸಾಗಿಸುವ ಟನ್ ಕಬ್ಬಿಗೆ 2400 ರೂ. ದರ ನಿಗದಿಪಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಇಲ್ಲಿ ಜರುಗಿದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿ ಸಹಕಾರ ಕಾರ್ಖಾನೆಗಳು 2400 ರೂ. ನೀಡಲು ಸಮ್ಮತಿಸಿವೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಬ್ಬಿನ ದರ ನಿಗದಿ ಸಂಬಂಧ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಬೆಲೆ ನಿಗದಿ ಕುರಿತು ಸುದೀರ್ಘ ಚರ್ಚೆಯಾಯಿತು. ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಪ್ರಮುಖರು ಸಭೆಯಲ್ಲಿದ್ದರು. ಕಳೆದ ವರ್ಷ ಟನ್ ಕಬ್ಬಿಗೆ 2250 ರೂ. ನೀಡಲಾಗಿತ್ತು. ಈ ವರ್ಷ ಹೆಚ್ಚು ಹಣ ನೀಡಬೇಕೆಂದು ಕಾರ್ಖಾನೆ ಆಡಳಿತ ಮಂಡಳಿ ಪ್ರಮುಖರೆದುರು ಜಿಲ್ಲಾಡಳಿತ ಬೇಡಿಕೆ ಇಟ್ಟಿತು. ಇದಕ್ಕೆ ಕಾರ್ಖಾನೆಯವರು ಮೊದಲು ವಿರೋಧ ವ್ಯಕ್ತಪಡಿಸಿದರೂ, ಅಂತಿಮವಾಗಿ ಟನ್ ಕಬ್ಬಿಗೆ 2400 ರೂ. ಕೊಡಲು ನಿರ್ಣಯಕ್ಕೆ ಬರಲಾಯಿತು.

ನಿಗದಿಯಂತೆ ಬೆಳಗ್ಗೆ 11ಕ್ಕೆ ರೈತ ಸಂಘದ ಮುಖಂಡರು, ಕಾರ್ಖಾನೆ ಆಡಳಿತ ಮಂಡಳಿಯವರು ಡಿಸಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಕಾರ್ಖಾನೆ ಆಡಳಿತ ಮಂಡಳಿಯ ಪ್ರಮುಖರೊಂದಿಗೆ ಮಾತ್ರ ಸಚಿವ ಪ್ರಭು ಚವ್ಹಾಣ್ ಅವರು ಸೇರಿದಂತೆ ಜನಪ್ರತಿನಿಧಿಗಳು ಪ್ರತ್ಯೇಕ ಸಭೆ ನಡೆಸಿ, ಎರಡೂವರೆ ಗಂಟೆಗಳ ಕಾಲ ಚರ್ಚಿಸಿದರು. ಇಲ್ಲಿ ಅಂತಿಮ ನಿರ್ಧಾರ ಕೈಗೊಂಡ ನಂತರ ರೈತರೊಂದಿಗೆ ಸಭೆ ನಡೆಸಲಾಯಿತು. ಇಲ್ಲಿ ಸಚಿವ ಚವ್ಹಾಣ್ ಅವರು ದರ ನಿಗದಿ ಘೋಷಣೆ ಮಾಡಿದರು.

ಕಬ್ಬಿನ ದರ ನಿಗದಿ ಹಾಗೂ ಸಹಕಾರ ಕಾರ್ಖಾನೆಗಳ ಸ್ಥಿತಿಗತಿ ಅವಲೋಕನ ಸಂಬಂಧ ಸಭೆ ನಡೆಸಲಾಗಿದೆ. ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ವಾದ ಹಾಗೂ ರೈತರ ಹಿತವನ್ನು ಪರಿಗಣಿಸಿ ದರ ನಿಗದಿ ಮಾಡಲಾಗಿದೆ. ಟನ್ ಕಬ್ಬಿಗೆ 2400 ರೂ. ಕೊಡಲು ನಿರ್ಣಯಕ್ಕೆ ಬರಲಾಯಿತು. ಇದಕ್ಕೆ ಕಾರ್ಖಾನೆಯವರು ಸಮ್ಮತಿಸಿದರು ಎಂದು ಸಚಿವರು ಹೇಳಿದರು.

ಪ್ರಸಕ್ತ ವರ್ಷ ಟನ್‌ಗೆ ರೂ. 2600 ಕೊಡುವಂತೆ ಕಾರ್ಖಾನೆಯವರಿಗೆ ನಾವು ಮನವರಿಕೆ ಮಾಡಿದ್ದೇವೆ. ನಂತರ ರೂ. 2500 ಕೊಡುವಂತೆ ತಿಳಿಸಿದ್ದೇವೆ. ಆದರೆ ಅದಕ್ಕೂ ಕಾರ್ಖಾನೆ ಆಡಳಿತ ಮಂಡಳಿಯವರು ಒಪ್ಪಲಿಲ್ಲ. ಅಂತಿಮವಾಗಿ 2400 ರೂ. ಕೊಡಲೇಬೇಕು ಎಂದು ಹೇಳಿದ್ದದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.

ಸಂಸದ ಭಗವಂತ ಖೂಬಾ ಮಾತನಾಡಿ, ಕಳೆದ ವರ್ಷಕ್ಕಿಂತ ಪ್ರಸಕ್ತ ಹೆಚ್ಚಿನ ದರ ನಿಗದಿಪಡಿಸಲಾಗಿದೆ. ಕಾರ್ಖಾನೆ ಜತೆಗೆ ಚರ್ಚೆ ನಡೆಸಿ ಈ ದರಕ್ಕೆ ಅವರಿಗೆ ಒಪ್ಪಿಸಲಾಗಿದೆ ಎಂದು ಹೇಳಿದರು.

ಶಾಸಕ ರಾಜಶೇಖರ ಪಾಟೀಲ್ ಮಾತನಾಡಿ, ರೈತರ ಜತೆಗೆ ಕಾರ್ಖಾನೆಗಳ ಸ್ಥಿತಿಗತಿ ಸಹ ನೋಡಬೇಕಾಗಿದೆ. ರೈತರ ಪರವಾಗಿ ಸಚಿವರು ಸೇರಿ ಎಲ್ಲ ಜನಪ್ರತಿನಿಧಿಗಳು ಕಾರ್ಖಾನೆ ಆಡಳಿತ ಮಂಡಳಿ ಜತೆಗೆ ಚರ್ಚೆ ನಡೆಸಿದ್ದೇವೆ. ಹೆಚ್ಚು ದರ ಕೊಡಿ ಎಂದು ಸುಮ್ಮನೆ ಹಿಂಡಿದರೆ ರಕ್ತ ಬರುತ್ತದೆ. ಹೀಗಾಗಿ 2400 ರೂ. ದರಕ್ಕೆ ಕಾರ್ಖಾನೆಗಳು ಒಪ್ಪಿದ್ದು, ರೈತರು ಮುಕ್ತವಾಗಿ ಸ್ವೀಕರಿಸಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಕರ್ನಾಟಕ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್ಐಐಡಿಸಿ) ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬು ವಾಲಿ, ಡಿಸಿ ರಾಮಚಂದ್ರನ್, ಎಸ್ಪಿ ನಾಗೇಶ, ಅಪರ ಡಿಸಿ ರುದ್ರೇಶ ಘಾಳಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಬಾಬುರೆಡ್ಡಿ, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ, ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಅಮರ ಖಂಡ್ರೆ, ಬೀದರ್ ಕಿಸಾನ್ ಸಕ್ಕರೆ ಕಾಖಾನೆ ನಿರ್ದೇಶಕ ನಸಿಮೊದ್ದೀನ್ ಪಟೇಲ್ ಭಾಲ್ಕೇಶ್ವರ ಶುಗರ್ಸ್ ನಿರ್ದೇಶಕ ಗುರುಪ್ರಸಾದ ಖಂಡ್ರೆ, ರೈತ ಸಂಘದ ಸಿದ್ರಾಮಪ್ಪ ಆಣದೂರೆ, ಮಲ್ಲಿಕಾರ್ಜುನ ಸ್ವಾಮಿ, ಸಂತೋಷ ಬಿಜಿ ಪಾಟೀಲ್, ಶ್ರೀಮಂತ ಬಿರಾದಾರ, ಶೇಷರಾವ ಕಣಜಿ, ಚಂದ್ರಶೇಖರ ಜಮಖಂಡೆ, ಸಿದ್ದಪ್ಪ ಭೂಶೆಟ್ಟಿ, ಬಾಬುರಾವ ಜೋಳದಾಬಕೆ, ಸತೀಶ ನನ್ನೂರೆ, ಪ್ರವೀಣ ಕುಲಕರ್ಣಿ ಇತರರಿದ್ದರು.

15 ದಿನದೊಳಗೆ ಹಣ ಕೊಡಿ
ರೂ. 2400 ಕಬ್ಬಿನ ದರ ತೃಪ್ತಿ ಇಲ್ಲದಿದ್ದರೂ ಅನಿವಾರ್ಯವಾಗಿ ಒಪ್ಪಿಕೊಳ್ಳುತ್ತೇವೆ. ಆದರೆ ಕಬ್ಬು ಸಾಗಣೆ ಮಾಡಿದ 15 ದಿನದೊಳಗೆ ರೈತರ ಖಾತೆಗೆ ಹಣ ಜಮೆ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ರೈತ ಪ್ರಮುಖರು ಬೇಡಿಕೆ ಮಂಡಿಸಿದರು. ರೈತ ಸಂಘದ (ಪುಟ್ಟಣ್ಣಯ್ಯ ಬಣ) ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ರೈತ ಸಂಘ (ಕೋಡಿಹಳ್ಳಿ ಬಣ) ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ ಇತರರು ಮಾತನಾಡಿ, ರೈತರಿಗೆ ಕಬ್ಬಿನ ಹಣ ಹಾಕಲು ಕಾರ್ಖಾನೆಯವರು ಬಹಳಷ್ಟು ವಿಳಂಬ ಮಾಡುತ್ತಿದ್ದಾರೆ. ನಿಯಮದಂತೆ ಕಬ್ಬು ಸಾಗಣೆ ಮಾಡಿದ 15 ದಿನದೊಳಗೆ ಹಣ ಕೊಡಬೇಕು. ಆದರೆ ಈ ನಿಯಮ ಇಲ್ಲಿ ಪಾಲಿಸುತ್ತಿಲ್ಲ. 15 ದಿನದೊಳಗೆ ಹಣ ಕೊಡಿಸುವಂತೆ ಸಂಬಂಧಿತ ಕಾರ್ಖಾನೆ ಆಡಳಿತ ಮಂಡಳಿಗಳಿಗೆ ಸ್ಪಷ್ಟ ಸೂಚನೆ ನೀಡಬೇಕು ಹಾಗೂ ಈ ಸಂಬಂಧ ನೋಟಿಸ್ ಸಹ ನೀಡಬೇಕು. ಒಂದು ವೇಳೆ ವಿಳಂಬ ಮಾಡಿದರೆ ಬಡ್ಡಿ ಸಹಿತ ಹಣ ಕೊಡಿಸಲು ತಿಳಿಸಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಚವ್ಹಾಣ್, ಈ ಬಗ್ಗೆ ಚರ್ಚೆ ನಡೆಸಲಾಗಿದೆ. ನಿಯಮದ ಪ್ರಕಾರ ಹಣ ಪಾವತಿಗಾಗಿ ಮತ್ತೊಮ್ಮೆ ಕಾರ್ಖಾನೆ ಆಡಳಿತ ಮಂಡಳಿಗೆ ತಿಳಿಸುವೆ ಎಂದು ಭರವಸೆ ನೀಡಿದರು.

ವಿಳಂಬಕ್ಕೆ ರೈತರ ಆಕ್ರೋಶ
ಡಿಸಿ ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 11ಕ್ಕೆ ಸಭೆ ನಿಗದಿಯಾಗಿತ್ತು. ರೈತ ಸಂಘದ ಪ್ರಮುಖರು ನಿಗದಿಯಂತೆ ಸಭೆಗೆ ಆಗಮಿಸಿದ್ದರು. ಆದರೆ ಮಧ್ಯಾಹ್ನ 1 ಗಂಟೆಯಾದರೂ ಸಚಿವರು ಸೇರಿ ಜನಪ್ರತಿನಿಧಿಗಳು ಸಭೆಗೆ ಬರದಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ಡಿಸಿ ಕಚೇರಿಯ ಇನ್ನೊಂದು ಹಾಲ್ನಲ್ಲಿ ಕಾರ್ಖಾನೆ ಆಡಳಿತ ಮಂಡಳಿಗಳ ಜತೆಗೆ ಸಚಿವ ಪ್ರಭು ಚವ್ಹಾಣ್ ಪ್ರತ್ಯೇಕ ಸಭೆ ನಡೆಸುತ್ತಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ರೈತರು, ನಮ್ಮ ಸಮ್ಮುಖದಲ್ಲಿಯೇ ದರ ನಿಗದಿ ಚರ್ಚೆ ನಡೆಯಬೇಕು. ರೈತರನ್ನು ದೂರವಿಟ್ಟು ಪ್ರತ್ಯೇಕ ಸಭೆ ನಡೆಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು. ಎರಡೂವರೆ ಗಂಟೆ ತಡವಾದರೂ ಸಭೆ ಆರಂಭವಾಗಿಲ್ಲ. ಇಲ್ಲಿ ಕುಡಿಯಲು ನೀರು ಸಹ ಇಲ್ಲ. ಇದು ರೈತರಿಗೆ ಮಾಡಿದ ಅವಮಾನ. 10 ನಿಮಿಷದೊಳಗೆ ಸಚಿವರು ಬರದಿದ್ದರೆ ಸಭೆಗೆ ಬಹಿಷ್ಕಾರ ಹಾಕಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು. ನಂತರ ಮಧ್ಯಾಹ್ನ 1.55ಕ್ಕೆ ಸಭಾಂಗಣಕ್ಕೆ ಸಚಿವರು ಸೇರಿ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಆಗಮಿಸಿದರು.

ಈ ವೇಳೆ ಪ್ರಭು ಚವ್ಹಾಣ್ ಮಾತನಾಡಿ, ನಾವು ಸಭೆಗೆ ವಿಳಂಬ ಮಾಡಿಲ್ಲ. ನಿಮ್ಮ ಪರವಾಗಿ ಕಾರ್ಖಾನೆ ಆಡಳಿತ ಮಂಡಳಿ ಜತೆ ಚರ್ಚೆ ನಡೆಸಿದ್ದೇವೆ ಎಂದು ಸಮಜಾಯಿಷಿ ನೀಡಿದರು. ಕೇವಲ 15 ನಿಮಿಷ ರೈತರೊಂದಿಗೆ ಸಭೆ ನಡೆಸಿ ದರ ನಿಗದಿ ಘೋಷಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net