

ಅಫಜಲಪುರ: ಪ್ರತಿ ಟನ್ ಕಬ್ಬಿಗೆ 5 ಸಾವಿರ ರೂ. ಬೆಲೆ ನಿಗದಿಪಡಿಸಬೇಕು. ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು. ಕಟಾವು ಮತ್ತು ಸಾಗಣೆ ವೆಚ್ಚಕ್ಕೆ ಸಂಬಂಧಿಸಿದಂತೆ ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರರ ಮಧ್ಯೆ ದ್ವಿಪಕ್ಷೀಯ ಒಪ್ಪಂದ ಮಾಡಿ ಸಮಿತಿ ರಚಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀಮಂತ ಬಿರಾದಾರ ಒತ್ತಾಯಿಸಿದರು.
ಅಂಬೇಡ್ಕರ್ ವೃತ್ತದಲ್ಲಿ ಕಬ್ಬು ಬೆಳೆಗಾರರ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದಿAದ ಮಂಗಳವಾರ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಮಾತನಾಡಿ, ಸಕ್ಕರೆ ಇಳುವರಿ ಘೋಷಣೆ ಮತ್ತು ತೂಕದಲ್ಲಿ ನಡೆಯುತ್ತಿರುವ ಮೋಸ ತಡೆಗಟ್ಟಲು ರೈತರನ್ನೊಳಗೊಂಡ ತಾಂತ್ರಿಕ ಸಮಿತಿ ರಚಿಸಬೇಕು. ರೇಣುಕಾ ಮತ್ತು ಕೆಪಿಆರ್ ಸಕ್ಕರೆ ಕಾರ್ಖಾನೆ ಸರ್ಕಾರ ನಿಗದಿ ಪಡಿಸಿದ್ದ ಎಫ್‌ಆರ್‌ಪಿ ದರದಲ್ಲಿ ಪ್ರತಿ ಟನ್‌ಗೆ 162 ರೂ. ಬಾಕಿ ಉಳಿಸಿಕೊಂಡಿದ್ದು, ಕೂಡಲೇ ಪಾವತಿಸಬೇಕು ಎಂದು ಆಗ್ರಹಿಸಿದರು.
2014ರ ಕಲಂ 4(ಎ) ಅಡಿಯಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಇಥೆನಾಲ್ ಉತ್ಪಾದಿಸುವ ಕಾರ್ಖಾನೆಗಳು ಹೆಚ್ಚುವರಿಯಾಗಿ 150 ರೂ. ಹಾಗೂ ಉತ್ಪಾದಿಸದ ಕಾರ್ಖಾನೆಗಳು 100 ರೂ. ನೀಡಬೇಕು ಎಂಬ ಆದೇಶವಿದೆ. ಆದರೆ ಸಂಬAಧಿತರು ಈ ಬಗ್ಗೆ ಮುತುವರ್ಜಿ ವಹಿಸುತ್ತಿಲ್ಲ ಎಂದು ದೂರಿದರು.
ಚಿಣಮಗೇರಾದ ಶ್ರೀ ವೀರಮಹಾಂತ ಶಿವಾಚಾರ್ಯರು ಮಾತನಾಡಿ, ಅನ್ನದಾತನಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟಲು ಸಂಘಟಿತ ಹೋರಾಟ ಅಗತ್ಯ. ಆಳುವ ಸರ್ಕಾರಗಳು ರೈತರ ನೆರವಿಗೆ ಬರಬೇಕು. ಸಕ್ಕರೆ ಕಾರ್ಖಾನೆಗಳ ಮಾಲೀಕರು ರೈತರಿಗೆ ಅನುಕೂಲ ಮಾಡುವ ಸೋಗಿನಲ್ಲಿ ಬಂದು, ರೈತರನ್ನೇ ಸುಲಿಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ತಹಸೀಲ್ದಾರ್ ಸಂಜೀವಕುಮಾರ ದಾಸರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ದೇಶಕ ಶಾಂತಪ್ಪ ಗುಣಕಿ ಸ್ಥಳಕ್ಕಾಗಮಿಸಿ ಸಮಸ್ಯೆ ಆಲಿಸಿ, ನಿಮ್ಮೆಲ್ಲ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಮೂರು ದಿನಗಳಲ್ಲಿ ಪರಿಹಾರ ಕಲ್ಪಿಸಲಾಗುತ್ತದೆ. ಸತ್ಯಾಗ್ರಹ ಹಿಂಪಡೆಯಿರಿ ಎಂದು ಮನವಿ ಮಾಡಿದರು. ಆದರೆ ಬೇಡಿಕೆ ಈಡೇರುವವರೆಗೂ ಧರಣಿ ವಾಪಸ್ ಪಡೆಯಲ್ಲ ಎಂದು ಹೋರಾಟಗಾರರು ಸ್ಪಷ್ಟಪಡಿಸಿದರು.
ಬಳೂರ್ಗಿಯ ಶ್ರೀ ಶಾಂತಲಿಂಗ ಸ್ವಾಮೀಜಿ, ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಎನ್.ಎಲ್.ಭರತಕುಮಾರ, ಪ್ರಾಂತ ರೈತ ಸಂಘದ ಜಿ¯್ಲÁ ಸಂಚಾಲಕ ಸಾಯಬಣ್ಣ ಗುಡುಬಾ, ಪ್ರಮುಖರಾದ ರಾಜುಗೌಡ ಪಾಟೀಲ್, ಯಶವಂತ ಪಟ್ಟೇದಾರ್, ಗುರುಲಿಂಗಯ್ಯ ಹಿರೇಮಠ, ಅಣ್ಣಾರಾಯ ಇಳಿಗೇರ, ಅಮೃತರಾವ ಪಾಟೀಲ್, ಗುರು ಚಾಂದಕವಟೆ, ಗೌಡಪ್ಪ ಪಾಟೀಲ್, ಅರ್ಜುನ ಕುಂಬಾರ, ಭೀಮರಾವ ಗೌರ, ಶಿವಯೋಗೆಪ್ಪ ಬಿರಾದಾರ, ಲP್ಷÀ್ಮಣ ಕಟ್ಟಿಮನಿ, ಯಲ್ಲಾಲಿಂಗ ತಳವಾರ, ರಾಯಪ್ಪ ಪೂಜಾರಿ, ಭೀಮರಾಯ ಹೊಸೂರ ಇತರರಿದ್ದರು.