ಟನ್ ಕಬ್ಬಿಗೆ 2,850 ರೂ. ನೀಡಲು ನಿರ್ಧಾರ

Published on

ಸಂಕೇಶ್ವರ, ಬೆಳಗಾವಿ: ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರತಿ ಟನ್ ಕಬ್ಬಿಗೆ 2,850 ರೂ. ದರ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಕಾರ್ಖಾನೆ ಅಧ್ಯಕ್ಷ ನಿಖಿಲ ಕತ್ತಿ ತಿಳಿಸಿದರು.
ಪಟ್ಟಣದ ಕಾರ್ಖಾನೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬಹುತೇಕ ಕಾರ್ಖಾನೆಗಳು ಈಗಾಗಲೇ ದರವನ್ನು ಘೋಷಿಸಿದ್ದು, ಅದರನ್ವಯ ಟನ್ ಕಬ್ಬಿಗೆ 2,850 ರೂ. ನೀಡಲು ಆಡಳಿತ ಮಂಡಳಿ ನಿರ್ಣಯ ತೆಗೆದುಕೊಂಡಿದೆ. ರೈತರ ಸಹಕಾರವೇ ನಮ್ಮ ಕಾರ್ಖಾನೆಗೆ ಶ್ರೀರಕ್ಷೆ ಎಂದರು.

ಸಕ್ಕರೆ ಉದ್ಯಮದ ಮೇಲೆ ಸರ್ಕಾರಗಳು ನಿಯಂತ್ರಣ ಹೇರುತ್ತಿದ್ದು, ಇದರಿಂದ ಕಾರ್ಖಾನೆಗಳು ಸಂಕಷ್ಟಕ್ಕೆ ಸಿಲುಕಿವೆ. ಕಾರ್ಖಾನೆಗಳ ಮೇಲೆ ಸಕ್ಕರೆ ರಫ್ತಿನ ನಿಯಂತ್ರಣ ತೆಗೆದರೆ ಅನುಕೂಲವಾಗುತ್ತದೆ ಎಂದರು.
ನಿರ್ದೇಶಕರಾದ ಅಪ್ಪಾಸಾಹೇಬ ಶಿರಕೋಳಿ, ಪ್ರಭುದೇವ ಪಾಟೀಲ, ಬಸವರಾಜ ಮರಡಿ, ಸುರೇಶ ಬೆಲ್ಲದ, ಶಿವನಾಯಿಕ ನಾಯಿಕ, ಬಸವರಾಜ ಕಲ್ಲಟ್ಟಿ, ಅಶೋಕ ಪಟ್ಟಣಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಕರ್ಕಿನಾಯಿಕ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಕ್ವಳ್ಳಿ, ಜಯಸಿಂಗ ಸನದಿ, ಕೇನ್ ಜನರಲ್ ಮ್ಯಾನೇಜರ್ ವಿ.ಸಿ.ಕುಲಕರ್ಣಿ, ಲೆಕ್ಕಾಧಿಕಾರಿ ಕಲ್ಪಪ್ಪ ಬೆಟಗೇರಿ, ಕಚೇರಿ ಅಧೀಕ್ಷಕ ಸುಭಾಷ ನಾಶಿಪುಡಿ ಇತರರಿದ್ದರು.

ವದಂತಿಗೆ ಕಿವಿಗೊಡಬೇಡಿ: ಹಿರಾ ಶುಗರ್ಸ್‌ ಮೇಲೆ ಸಾಲ ಮಾಡಲಾಗಿದೆ ಎಂದು ಆರೋಪಿಸುತ್ತಿರುವ ಮಾಜಿ ಸಚಿವರು ಕಾರ್ಖಾನೆಯಲ್ಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ?. 10 ಸಾವಿರ ಟಿಸಿಡಿ ಕಬ್ಬು ನುರಿಸುವ ಸಾಮರ್ಥ್ಯ ವಿಸ್ತರಣೆ, 52 ಮೆ.ವ್ಯಾಟ್ ಕೋಜನ್, ಪ್ರತಿ ದಿನ 54 ಸಾವಿರ ಲೀ. ಸ್ಪಿರಿಟ್ ಉತ್ಪಾದನೆ, 50 ಸಾವಿರ ಲೀ. ಇಥೆನಾಲ್ ಘಟಕ ಸ್ಥಾಪಿಸಲು ಸಾಲ ಪಡೆಯಲಾಗಿದೆ ಹೊರತು ಕಾರ್ಖಾನೆ ಮಾರಾಟ ಮಾಡಲು ಅಲ್ಲ ಎಂದು ಕಾರ್ಖಾನೆ ಅಧ್ಯಕ್ಷ ನಿಖಿಲ ಕತ್ತಿ ಸ್ಪಷ್ಟಪಡಿಸಿದರು.

14 ಲಕ್ಷ ಮೆ. ಟನ್ ನುರಿಸುವ ಗುರಿ: ಸಂಕೇಶ್ವರ ತಾಲೂಕಿನ ಬೆಲ್ಲದ ಬಾಗೇವಾಡಿ ಸಕ್ಕರೆ ಕಾರ್ಖಾನೆ ಪ್ರತಿ ಟನ್ ಕಬ್ಬಿಗೆ 2,850 ರೂ. ದರ ನಿಗದಿ ಮಾಡಲಾಗಿದೆ ಎಂದು ಕಾರ್ಖಾನೆ ವ್ಯವಸ್ಥಾಪಕ
ನಿರ್ದೇಶಕ ನಿಖಿಲ ಕತ್ತಿ ತಿಳಿಸಿದರು. ಕಾರ್ಖಾನೆ ಪ್ರಸಕ್ತ ಸಾಲಿನಲ್ಲಿ 14 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಿ ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net