ಮೈಸೂರು: ಮೈಸೂರು ವ್ಯಾಪ್ತಿಯ ವಿವಿಧ ನಿಗಮ-ಮಂಡಳಿ ಮತ್ತು ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ನೇಮಕಾತಿ ಮಾಡಲಾಗಿದೆ.
ಇತ್ತೀಚೆಗಷ್ಟೇ ಎಲ್ಲ ನಿಗಮ, ಮಂಡಳಿ ಮತ್ತು ಪ್ರಾಧಿಕಾರದ ಅಧ್ಯಕ್ಷರ ನೇಮಕಾತಿಯನ್ನು ರದ್ದು ಪಡಿಸಲಾಗಿತ್ತು. ಇದರಿಂದ ತೆರವಾಗಿರುವ ಸ್ಥಾನಗಳಿಗೆ ಸೋಮವಾರ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇನ್ನೂ ಉಳಿದ ಅಧ್ಯಕ್ಷ ಸ್ಥಾನಗಳಿಗೆ ನೇಮಕಾತಿ ಬಾಕಿ ಉಳಿದಿದೆ. ಅದಕ್ಕಾಗಿ ಆಕಾಂಕ್ಷಿಗಳಿಂದ ಲಾಬಿ ನಡೆದಿದೆ.
ಮೈಲ್ಯಾಕ್‌ಗೆ ರಘು:
ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಕೌಟಿಲ್ಯ ರಘು ನೇಮಕಗೊಂಡಿದ್ದಾರೆ.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಆರ್.ಮಂಜುಳಾ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಕಾರ್ಖಾನೆ ಅಧ್ಯಕ್ಷರಾಗಿದ್ದ ಎನ್.ವಿ.ಫಣೀಶ್ ನೇಮಕಾತಿಯನ್ನು ಇತ್ತೀಚೆಗೆ ರದ್ದುಪಡಿಸಲಾಗಿತ್ತು.
ಬಿಜೆಪಿ ಸರ್ಕಾರದ ಅವಧಿಯಲ್ಲೇ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆರ್.ರಘು ಕಾರ್ಯನಿರ್ವಹಿಸಿದ್ದರು. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಚುನಾವಣೆಯಲ್ಲಿ ಸೋಲು ಕಂಡಿದ್ದ ಅವರಿಗೆ ಇದೀಗ ಮತ್ತೊಂದು ಅವಕಾಶ ದೊರೆತಿದೆ.
ವಸ್ತುಪ್ರದರ್ಶನ ಪ್ರಾಧಿಕಾರಕ್ಕೆ ಶ್ರೀನಿವಾಸ್:
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿ ಕೆ.ಆರ್.ನಗರದ ಎಂ.ಕೆ.ಶ್ರೀನಿವಾಸ್(ಮಿರ್ಲೆ ಶ್ರೀನಿವಾಸ್‌ಗೌಡ) ಅವರನ್ನು ನೇಮಕ ಮಾಡಿ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಬಿ.ವಿಮಲಾಕ್ಷಿ ಆದೇಶ ಹೊರಡಿಸಿದ್ದಾರೆ. ಈ ಸ್ಥಾನದಲ್ಲಿ ಈ ಹಿಂದೆ ಹೇಮಂತ್‌ಕುಮಾರ್ ಗೌಡ ಇದ್ದರು.
ಝೂಗೆ ಶಿವಕುಮಾರ್:
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವ ಕುಮಾರ್ ನೇಮಕಗೊಂಡಿದ್ದಾರೆ. ಇವರು ಬಿಜೆಪಿ ಹಿರಿಯ ಮುಖಂಡರು. ಈ ಸ್ಥಾನದಲ್ಲಿ ಈ ಹಿಂದೆ ಎಲ್.ಆರ್.ಮಹದೇವಸ್ವಾಮಿ ಇದ್ದರು.
ಕಾಡಾಕ್ಕೆ ನಿಜಗುಣರಾಜು:
ಕಾವೇರಿ ಜಲಾನಯನ ಯೋಜನೆ ವ್ಯಾಪ್ತಿಯ ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ(ಕಾಡಾ) ಅಧ್ಯಕ್ಷರಾಗಿ ಚಾಮರಾಜನಗರದ ಜಿ.ನಿಜಗುಣರಾಜು ನೇಮಕಗೊಂಡಿದ್ದಾರೆ. ಈ ಹಿಂದೆ ಎನ್.ಶಿವಲಿಂಗಯ್ಯ ಅಧ್ಯಕ್ಷರಾಗಿದ್ದರು.