ಜ್ಯೋತಿಷ್ಯ ಭಯ ಹುಟ್ಟಿಸಬಾರದು

mysore
Published on

ಮೈಸೂರು: ಜ್ಯೋತಿಷ್ಯಶಾಸ್ತ್ರ ಸಮಾಜಕ್ಕೆ ಬೆಳಕು ನೀಡಬೇಕೇ ಹೊರತು, ಶೋಷಣೆ ಮಾಡಿ ಭಯ ಹುಟ್ಟಿಸಬಾರದು ಎಂದು ಶ್ರೀರಂಗಪಟ್ಟಣದ ಬೇಬಿಮಠ ಮತ್ತು ಚಂದ್ರವನ ಆಶ್ರಮದ ಶ್ರೀ ತ್ರೀನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಜ್ಯೋತಿಷರ ಮತ್ತು ಜ್ಯೋತಿಷ್ಯ ಬೋಧನಾ ಸಂಸ್ಥೆಗಳ ಒಕ್ಕೂಟದ ಸಹಯೋಗದಲ್ಲಿ ಮುಕ್ತಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜ್ಯೋತಿರ್ ವಿಜ್ಞಾನ ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜ್ಯೋತಿಷ್ಯಶಾಸ್ತ್ರವನ್ನು ತಿಳಿದವರು ಮತ್ತು ಅರ್ಥ ಮಾಡಿಕೊಂಡವರು ಯಾವುದೇ ಕಾರಣಕ್ಕೂ ಜನರಲ್ಲಿ ಭಯ ಹುಟ್ಟಿಸುವುದಿಲ್ಲ. ಬದಲಿಗೆ ಭರವಸೆ ಮೂಡಿಸುತ್ತಾರೆ. ಶೋಷಣೆ ಮಾಡುವುದಿಲ್ಲ, ಬದಲಿಗೆ ಪೋಷಣೆ ಮಾಡುತ್ತಾರೆ ಎಂದರು.

ಇತ್ತೀಚಿಗೆ ಜ್ಯೋತಿಷ್ಯಶಾಸ್ತ್ರ ಹೇಳುವವರು ಜನರಲ್ಲಿ ಆತಂಕ, ಭೀತಿ ಹುಟ್ಟಿಸುವುದರೊಂದಿಗೆ ಶೋಷಣೆ ಮಾಡುತ್ತಿದ್ದಾರೆ. ಇದು ಶಾಸ್ತ್ರವಲ್ಲ, ಅಧರ್ಮ. ಇದು ಸಮಾಜ, ಜನರನ್ನು ಎಚ್ಚರಿಸುವ ಮಾಧ್ಯಮವಾಗಬೇಕು ಎಂದು ಸಲಹೆ ನೀಡಿದರು.

ಯಾರಿಗೆ ತಮ್ಮ ಮೇಲೆಯೇ ನಂಬಿಕೆ ಇರುವುದಿಲ್ಲವೋ ಅವರು ಯಾವುದನ್ನೂ ನಂಬುವುದಿಲ್ಲ. ಶಾಸ್ತ್ರ, ವೇದ, ಪುರಾಣ ಶತಮಾನಗಳಿಂದ ಉಳಿದುಕೊಂಡು ಬಂದಿವೆ. ಇದು ಅವುಗಳ ಜೀವಂತಿಕೆಗೆ ಸಾಕ್ಷಿ. ಕರಾಮುವಿ ವತಿಯಿಂದ ಜ್ಯೋತಿರ್ ವಿಜ್ಞಾನ ಶಿಕ್ಷಣ ಕಲಿಕೆಗೆ ಅವಕಾಶ ಕಲಿಕೆ ಮಾಡಿಕೊಟ್ಟಿರುವುದು ಉತ್ತಮ ಕಾರ್ಯವಾಗಿದೆ ಎಂದರು.

ಶಿಕ್ಷಣ ಮತ್ತು ಆರೋಗ್ಯದಿಂದ ಮಾತ್ರ ದೇಶ ಬಲಿಷ್ಯವಾಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳಾಗಿಯೇ ಇರಬೇಕು. ಅದಕ್ಕೆ ಯಾವುದೇ ಲೇಪನ ಅಂಟಿಸಬಾರದು.

ವಿದ್ಯಾಸಂಸ್ಥೆದೊಳಗೆ ಬಾಹ್ಯಶಕ್ತಿಗಳ ಹಸ್ತಕ್ಷೇಪವೂ ಇರಬಾರದು. ಅದು ಕೇವಲ ಶಿಕ್ಷಣಕ್ಕಾಗಿಯೇ ಮೀಸಲಾಗಬೇಕು ಎಂದು ಸಲಹೆ ನೀಡಿದರು.

ವಿಶ್ವವಿದ್ಯಾಲಯಗಳು ಸಂಕಷ್ಟದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿವೆ. ಅವುಗಳ ಕೆಲಸ ಕಾರ್ಯಗಳು ಸಮರ್ಪಕವಾಗಿ ಆಗುತ್ತಿಲ್ಲ. ಒಂದು ವರ್ಷವಾದರೂ ಕಡತಗಳಿಗೆ ಅನುಮೋದನೆ ದೊರೆಯುತ್ತಿಲ್ಲ. ಬರೀ ಸರ್ಕಾರಿ ಕಚೇರಿಗೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಜೀವನ ಸಾರ್ಥಕವಾಗುವಲ್ಲಿ ವಿಶ್ವವಿದ್ಯಾಲಯ ಮಾತ್ರ ಇದೆ. ಅನ್ನ ಬಿತ್ತುವ ರೈತ, ಅಕ್ಷರ ಬಿತ್ತುವ ವಿಶ್ವವಿದ್ಯಾಲಯಗಳು ಸಂಕಷ್ಟಕ್ಕೆ ಸಿಲುಕಿಕೊಂಡರೆ ಇಡೀ ದೇಶವೇ ತೊಂದರೆಗೆ ಒಳಗಾಗಲಿದೆ. ಆದ್ದರಿಂದ ವಿಶ್ವವಿದ್ಯಾಲಯಗಳ ಕೆಲಸಗಳು ತ್ವರಿತಗತಿಯಲ್ಲಿ ಆಗುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕಿದೆ ಎಂದರು.

ಕರಾಮುವಿ ಜ್ಯೋತಿರ್ ವಿಜ್ಞಾನದ ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್‌ಗಳ ಪಠ್ಯಕ್ರಮವನ್ನು ಬಿಡುಗಡೆಗೊಳಿಸಲಾಯಿತು.

ಇಸ್ರೋ ವಿಜ್ಞಾನಿ ಡಾ.ಎಸ್.ವಿ.ಶರ್ಮ, ತ್ರಿಸ್ಕಂದ ಜ್ಯೋತಿರ್ ವಿದ್ವಾನ್ ಡಾ.ಕೆ.ಜಿ.ಪುಟ್ಟು ಹೊನ್ನಯ್ಯ, ಜ್ಯೋತಿಷಿ ಭಾನುಪ್ರಕಾಶ್ ಶರ್ಮ, ಒಕ್ಕೂಟದ ಅಧ್ಯಕ್ಷ ಬಿ.ಎನ್.ಅನಂತರಾಘವನ್, ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಎಸ್.ಕೆ.ನವೀನ್‌ಕುಮಾರ್, ಪರೀಕ್ಷಾಂಗ ಕುಲಸಚಿವ ಡಾ.ಸಿ.ಎಸ್‌ಆನಂದಕುಮಾರ್, ಡೀನ್(ಶೈಕ್ಷಣಿಕ) ಪ್ರೊ.ಎಂ.ರಾಮನಾಥಂ ನಾಯ್ಡು, ಡೀನ್(ಅಧ್ಯಯನ ಕೇಂದ್ರ) ಡಾ.ಎನ್.ಆರ್.ಚಂದ್ರೇಗೌಡ, ಜ್ಯೋತಿರ್ ವಿಜ್ಞಾನ ಸಂಯೋಜನಾಧಿಕಾರಿ ಡಾ.ಎಸ್.ಕೇಶವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net