

ಶಿರಾಳಕೊಪ್ಪ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಪುರಸಭೆ ಮುಂಭಾಗ ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡರು.
ರಾಜ್ಯ ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಎಲ್ಲ ಸೌಲಭ್ಯಗಳು ಪೌರಕಾರ್ಮಿಕರಿಗೆ ತಲುಪುವಂತೆ ಮಾಡಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ ನೌಕರರನ್ನು ಸದರಿ ಅಧಿನಿಯಮದಿಂದ ಕೈಬಿಟ್ಟು ಸಕ್ರಮಗೊಳಿಸುವುದು. 2022ರ ವಿಶೇಷ ನೇಮಕಾತಿಯಡಿ ಆಯ್ಕೆಯಾದ ಪೌರಕಾರ್ಮಿಕರು, ಲೋಡರ್ಸ್‌ಗಳಿಗೆ ಎಸ್‌ಎಫ್‌ಸಿ ವೇತನ ನೀಡುವುದು. ಸ್ಥಳೀಯ ಸಂಸ್ಥೆಗಳಲ್ಲಿ ನೀರು ಸರಬರಾಜು ನೌಕರರನ್ನು ವಿಶೇಷ ನೇಮಕಾತಿಯಡಿ ಆಯ್ಕೆ ಮಾಡುವುದು. ಪೌರ ಸೇವಾ ನೌಕರರಿಗೆ ಜ್ಯೋತಿ ಸಂಜೀವಿನಿ ಚಿಕಿತ್ಸಾ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.
ಪೌರಕಾರ್ಮಿಕರಿಗೆ ನ್ಯಾಯಯುತ ಗೌರವ ಸಲ್ಲಬೇಕಾದರೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿ ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ, ಉಪಾಧ್ಯಕ್ಷ ಮುದಾಸೀರ್ ಅವರಿಗೆ ಮನವಿ ಸಲ್ಲಿಸಿದರು.
ಪೌರಕಾರ್ಮಿಕ ಸಂಘದ ಅಧ್ಯಕ್ಷ ಪ್ರಕಾಶ, ಉಪಾಧ್ಯಕ್ಷ ನಾಗರಾಜ್, ಎಸ್‌ಡಿಎ ಗದಿಗೇಶ್, ಮ್ಯಾನೇಜರ್ ನಿರಂಜನ್, ಪುಟ್ಟಪ್ಪ, ಅರುಣಕುಮಾರ್, ತೇಜಪ್ಪ, ಗಜೇಂದ್ರ, ರತ್ನಮ್ಮ, ಜೀನಮ್ಮ, ಶಶಿಕಲಾ, ಕರಿಬಸಪ್ಪ, ರಾಜು, ಸಂದೀಪ, ಆದಮ್ ಇತರರಿದ್ದರು.