ಜ್ಯೋತಿಪ್ರಕಾಶ್ ಸೂಡಾ ಅಧ್ಯಕ್ಷ

27 smg S.S. Jyothiprakash
Published on

ಶಿವಮೊಗ್ಗ: ನಿರೀಕ್ಷೆಯಂತೆ ಶಿವಮೊಗ್ಗ ಎಪಿಎಂಸಿ ನಿರ್ದೇಶಕ ಎಸ್.ಎಸ್.ಜ್ಯೋತಿಪ್ರಕಾಶ್ ಅವರನ್ನು ಸೂಡಾ (ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಶಿವಮೊಗ್ಗ ಹಾಗೂ ಭದ್ರಾವತಿಯ ನಾಲ್ವರು ಬಿಜೆಪಿ ಕಾರ್ಯಕರ್ತರನ್ನು ಸದಸ್ಯರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮೂರು ವರ್ಷ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಈ ನೇಮಕ ಅಸ್ತಿತ್ವದಲ್ಲಿರುತ್ತದೆ.

ಗೋಪಾಳದ ಉಮಾ ಮೂರ್ತಿ (ಮಹಿಳಾ ಸದಸ್ಯರು), ವಿದ್ಯಾನಗರದ ಎಸ್.ದೇವರಾಜ್(ಪರಿಶಿಷ್ಟ ಜಾತಿ), ಭದ್ರಾವತಿಯ ಹಿರಿಯ ಬಿಜೆಪಿ ಮುಖಂಡ ವಿ.ಕದಿರೇಶ್ ಹಾಗೂ ಬಿ.ಜಿ.ರಾಮಲಿಂಗಯ್ಯ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಹಲವು ಜವಾಬ್ದಾರಿ ನಿರ್ವಹಣೆ: ಎಸ್.ಎಸ್.ಜ್ಯೋತಿಪ್ರಕಾಶ್ ಇದುವರೆಗೆ ಬಿಜೆಪಿಯಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಬಿಜೆಪಿ ನಗರಾಧ್ಯಕ್ಷರಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಕೈಗಾರಿಕಾ ಪ್ರಕೋಷ್ಠದ ಸಹ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಎರಡು ಅವಧಿಗೆ ಶಿವಮೊಗ್ಗ ಎಪಿಎಂಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ಹಲವು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಜ್ಯೋತಿಪ್ರಕಾಶ್ ಪ್ರಮುಖವಾಗಿ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವಿವಿಧ ಚುನಾವಣೆಗಳಲ್ಲಿ ಸಾಕಷ್ಟು ಪ್ರಭಾವ ಬೀರಿದ್ದಾರೆ. ಕಳೆದ ಎರಡು ಅವಧಿಯಲ್ಲಿ ಶಿವಮೊಗ್ಗ ಎಪಿಎಂಸಿ ಚುನಾವಣೆಗಳಲ್ಲೂ ಬಿಜೆಪಿ ಅಭ್ಯರ್ಥಿಗಳ ಗೆಲುವಿನಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net