ಜ್ಞಾನೇಂದ್ರಿಯಗಳ ನಿಯಂತ್ರಣ ಮುಖ್ಯ

mysore
Published on

ಮೈಸೂರು: ಶಿಕ್ಷಕರಿಗೆ ಪರಿಪೂರ್ಣ ಕಲಿಕೆ ಅವಶ್ಯಕ ಎಂದು ವಸಂತಮಹಲ್‌ನ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಡಿ.ಉದಯಕುಮಾರ್ ಹೇಳಿದರು.

ಸುತ್ತೂರಿನ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಹಿರಿಯ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಮಾತನಾಡಿದರು

ವಿದ್ಯಾರ್ಥಿಗಳು ಆಂತರಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಅದಕ್ಕೆ ಜ್ಞಾನೇಂದ್ರಿಯಗಳ ನಿಯಂತ್ರಣ ಬಹಳ ಮುಖ್ಯ. ಶಿಕ್ಷಕರಿಗೆ ನಡೆ-ನುಡಿ, ಆಚಾರ-ವಿಚಾರ ಬಹಳ ಮುಖ್ಯ. ಸ್ವಾರ್ಥರಹಿತ ಸಮಾಜ ನಿರ್ಮಾಣ ಶಿಕ್ಷಕರಿಂದ ಮಾತ್ರ ಸಾಧ್ಯ.

ಶಿಕ್ಷಣ ಎಂಬುದು ಮನಸ್ಸಿನ ಆಲೋಚನೆಯ ತರಬೇತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಮೂಲ ವಿಷಯಗಳ ಅಧ್ಯಯನ ಕಡಿಮೆಯಾಗಿದ್ದು, ಚಟುವಟಿಕೆ ಸಹಿತವಾದ ಮೂಲ ವೃತ್ತಿಗೆ ಸಂಬಂಧಿಸಿದ ವಿಷಯಗಳ ಅಧ್ಯಯನ ಅವಶ್ಯಕವಾಗಿದೆ ಎಂದು ತಿಳಿಸಿದರು.

ಜೆಎಸ್‌ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್.ತ್ರಿಪುರಾಂತಕ ಮಾತನಾಡಿ, ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭಯ ಎಂಬುದು ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಅದರ ಜತೆಗೆ ರೈತರು ಹಾಗೂ ಸೈನಿಕರನ್ನು ಸ್ಮರಿಸಬೇಕು ಎಂದರು.

ಇಡೀ ಪ್ರಪಂಚಕ್ಕೆ ಜ್ಞಾನದ ಬೆಳಕನ್ನು ಚೆಲ್ಲಿದವರು ಭಾರತೀಯರಾಗಿದ್ದು, ಶಿಕ್ಷಣದ ಜತೆಗೆ ವಿದ್ಯಾರ್ಥಿಗಳು ಹೊಂದಾಣಿಕೆ, ಸಹಕಾರ ಹಾಗೂ ರಾಷ್ಟ್ರಭಕ್ತಿ ಮುಂತಾದ ಗುಣಗಳನ್ನು ಮೈಗೂಡಿಸಿಕೊಂಡು, ಜೀವನದಲ್ಲಿ ಉತ್ಸಾಹದಿಂದ ಇರಬೇಕು ಎಂದು ತಿಳಿಸಿದರು.

ಪ್ರಾಂಶುಪಾಲ ಡಾ.ಎಚ್.ಎಂ. ಮಹೇಶ್ ಮಾತನಾಡಿ, ವಿದ್ಯಾರ್ಥಿ ಮತ್ತು ಶಿಕ್ಷಕರ ಬಾಂಧವ್ಯ ಅನನ್ಯವಾದದ್ದು, ದೊರೆಯುವ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಸಾಧನೆ ಮಾಡುವುದರ ಜತೆಗೆ ಪ್ರತಿ ಕ್ಷಣವನ್ನು ಆನಂದಿಸಬೇಕು. ಬೇರೆಯವರಲ್ಲೂ ಸಂತಸ ತರುವ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಡಿ.ಎಸ್.ವೀಣಾ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net